ಸದ್ಯದಲ್ಲೇ ಸರ್ಕಾರದಿಂದ ಶಾಲಾ ಕಾಲೇಜುಗಳ ಶುಲ್ಕಗಳ ಘೋಷಣೆ

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಶೈಕ್ಷಣಿಕ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿದ್ದು ಶಿಕ್ಷಣ ಸಂಸ್ಥೆಗಳೂ ಸಂಕಷ್ಟ ಎದುರಿಸುತ್ತಿದೆ. ಅದರಲ್ಲೂ ಶುಲ್ಕ ವಿಚಾರದಲ್ಲಿ ಪೋಷಕರು, ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ಜಟಾಪಟಿ ನಡೆದಿದೆ. ಈ ನಡುವೆ ಅನುದಾನಿತ ಶಾಲೆಗಳ ಶುಲ್ಕಗಳನ್ನು ಇನ್ನೆರಡು ದಿನಗಳಲ್ಲಿ ನಿಗದಿಪಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಶಿವಮೊಗ್ಗದಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡ ಸಚಿವ ಸುರೇಶ ಕುಮಾರ್, ಶುಲ್ಕ ನಿಗದಿ ಪಡಿಸುವ ಕುರಿತು ಎಲ್ಲಾ ಅಂಶಗಳನ್ನು ಪರಿಗಣಿಸಬೇಕಿದೆ. ಒಂದೆಡೆ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಪೋಷಕರ ಆರ್ಥಿಕ ಸ್ಥಿತಿಗತಿ ಹಾಗೂ ಹದಗೆಟ್ಟಿರುವ ಶಾಲೆಗಳ ಸ್ಥಿತಿಗತಿಗಳನ್ನು ಕೂಡ ಪರಿಗಣಿಸಬೇಕಿದೆ. ಯಾರಿಗೂ ಅನ್ಯಾಯವಾಗದಂತೆ ಶುಲ್ಕ ನಿಗದಿಪಡಿಸಲಾಗುವುದು ಎಂದರು.

ಗಡಿ ಭಾಗಗಳ ಅಭಿವೃದ್ಧಿಗೆ ಸರ್ಕಾರ ಬದ್ಧ; ಸಚಿವ ರಮೇಶ್ ಜಾರಕಿಹೊಳಿ‌

ಬೆಂಗಳೂರು: ಕರ್ನಾಟಕದ ಗಡಿ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ರಾಜ್ಯದ ಬೊಕ್ಕಸಕ್ಕೆ ತುಂಬಾ ಒತ್ತಡವಾಗದಂತೆ ಅನುದಾನ‌ ನೀಡುವಂತೆ ಮುಖ್ಯಮಂತ್ರಿಗಳ‌ ಮನ ಒಲಿಸುವುದಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು. ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ‌.ಸೋಮಶೇಖರ್ ಅವರೊಂದಿಗೆ ಸಚಿವ ರಮೇಶ್ ಜಾರಕಿಹೊಳಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ 2021-22ನೇ ಸಾಲಿನಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಕೊಡಿಸುವಂತೆ ಡಾ.‌ಸೋಮಶೇಖರ್ ಅವರು ಸಚಿವರಿಗೆ ಮನವಿ ಸಲ್ಲಿಸಿದರು. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಸಚಿವ ರಮೇಶ್ ಜಾರಕಿಹೊಳಿ,‌ ಕರ್ನಾಟಕ ರಾಜ್ಯದ ಒಟ್ಟು 19 ಜಿಲ್ಲೆಗಳು ನೆರೆ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದ್ದು ಆ ಜಿಲ್ಲೆಗಳ 63 ತಾಲ್ಲೂಕುಗಳನ್ನು ಅಭಿವೃದ್ಧಿ ಪಡಿಸುವ ಇಚ್ಚೆ ಸರ್ಕಾರಕ್ಕಿದೆ. ಕಳೆದ ವರ್ಷದ ಬಜೆಟ್ ನಲ್ಲಿ ಘೋಷಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಮಹಾಮಾರಿ ಕೋವಿಡ್ ನ‌ ಸಾಂಕ್ರಾಮಿಕ…

ಇನ್ನು ಮುಂದೆ ಈ ಹಣ್ಣಿನ ಹೆಸರು ಡ್ರ್ಯಾಗನ್ ಅಲ್ಲ, ‘ಕಮಲಂ’

ಊರುಗಳ ಹೆಸರನ್ನು, ನಗರಗಳ ಹೆಸರನ್ನು ನಮ್ಮ ಇತಿಹಾಸಗಳಿಗೆ ತಕ್ಕಂತೆ ಮರುನಾಮಕರಣ ಮಾಡಿದ್ದುಂಟು. ಇದೀಗ ಹಣ್ಣುಗಳ ಹೆಸರನ್ನೂ ಬದಲಾಯಿಸುವ ಪ್ರಯತ್ನ ನಡೆದಿದೆ. ಕುತೂಹಲಕಾರಿ ತೀರ್ಮಾನವೊಂದರಲ್ಲಿ ಡ್ರ್ಯಾಗನ್ ಫ್ರೂಟ್ ಹೆಸರನ್ನು ಕಮಲಂ ಎಂದು ಬದಲಾಯಿಸಲಾಗಿದೆ. ಗುಜರಾತ್ ನ ಸರ್ಕಾರ ಈ ಮರುನಾಮಕರಣ ಮಾಡಲು ಮುಂದಾಗಿದೆ. ಡ್ರ್ಯಾಗನ್ ಚೀನಾಕ್ಕೆ ಬಲು ಪ್ರೀಯ ಹೆಸರು. ಇತ್ತೀಚಿನ ದಿನಗಳಲ್ಲಿ ಚೀನಾವನ್ನು ಸಾಂಪ್ರದಾಯಿಕ ಎದುರಾಳಿ ಎಂದೇ ಭಾವಿಸಲಾಗುತ್ತಿದ್ದು ಅನೇಕ ವಿಚಾರಗಳಲ್ಲಿ ಆ ದೇಶವನ್ನು ಭಾರತೀಯರು ವಿರೋಧಿಸುತ್ತಲೇ ಇದ್ದಾರೆ. ಅದೇ ಸಂದರ್ಭದಲ್ಲಿ ಹಣ್ಣಿನ ಹೆಸರನ್ನೂ ಚೀನೀ ಪದದ ಬದಲಾಗಿ ಸ್ವದೇಶಿ ಹೂವಿನ ಹೆಸರನ್ನು ಇಡಲಾಗಿದೆ. ಈ ಹಣ್ಣಿನ ಹೊರ ಭಾಗ ಕಮಲದ ಆಕೃತಿಯನ್ನು ಹೋಲುತ್ತದೆ ಆದ್ದರಿಂದ ಅದಕ್ಕೆ ಕಮಲಮ್ ಎಂದು ರಾಜ್ಯ ಸರ್ಕಾರ ನಾಮಕರಣ ಮಾಡಲಿದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾಣಿ ಹೇಳಿದ್ದಾರೆ.

ಟೀಮ್ ಇಂಡಿಯಾಗೆ ಅಭಿನಂದನೆಗಳ ಮಹಾಪೂರ

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿ ಗೆದ್ದಿರುವ ಟೀಮ್ ಇಂಡಿಯಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ. ನಮ್ಮ ಯುವ ಆಟಗಾರರ ದೃಢ ಸಂಕಲ್ಪದಿಂದ ಗೆಲುವು ದಕ್ಕಿದೆ ಹೆಮ್ಮೆಯಾಗುತ್ತಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಗೆಲುವಿಗೆ ಟೀಮ್ ಇಂಡಿಯಾವನ್ನು ಅಭಿನಂದಿಸಿರುವ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಗಾಯಗಳು, ಅನಿಶ್ಚಿತತೆಯ ನಡುವೆಯೂ ಸಿಕ್ಕಿದ ಗೆಲುವು ಶ್ರೇಷ್ಠವಾದ ಸರಣಿ ಜಯ ಎಂದು ಬಣ್ಣಿಸಿದ್ದಾರೆ. ಈ ಸಾಧನೆಯನ್ನು ಅಭಿನಂದಿಸಿರುವ ವಿವಿಎಸ್ ಲಕ್ಷ್ಮಣ್, ಅಜಿಂಕ್ಯಾ ರೆಹಾನೆಯವರ ಉತ್ತಮ ನಡೆ ಜಾಗತಿಕ ಗಮನಸೆಳೆದಿದೆ ಎಂದಿದ್ದಾರೆ.

ಅಮೆರಿಕಾಗೆ ನೂತನ ಸಾರಥಿ; ಅಧ್ಯಕ್ಷರಾಗಿ ಜೋ ಬೈಡೆನ್ ಪದಗ್ರಹಣ

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ- ಬೈಡೆನ್ ಅಧಿಕಾರ ಸ್ವೀಕರಿಸಿದ್ದಾರೆ. ಇದೇ ವೇಳೆ, ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪದಗ್ರಹಣ ಮಾಡಿದ್ದಾರೆ. ಯುಎಸ್ ಕ್ಯಾಪಿಟಲ್ ನಲ್ಲಿ ನಡೆದ ಸಮಾರಂಭದಲ್ಲಿ ನೂತನ ಅಧ್ಯಕ್ಷ ಜೋ- ಬೈಡೆನ್ ಅವರಿಗೆ ಅಮೆರಿಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಾಬರ್ಟ್ ಜಾನ್ಸ್ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕರಿಸಿ, ಅಧಿಕಾರ ವಹಿಸಿಕೊಂಡ ಬೈಡೆನ್, ಪ್ರಜಾತಂತ್ರದ ಗೆಲುವಿನ ಮೂಲಕ ನಾನು ಅಧಿಕಾರವಹಿಸಿಕೊಂಡಿದ್ದೇನೆ ಎಂದರು. ದೇಶದ ಮುಂದೆ ಹಲವಾರು ಸವಾಲುಗಳಿದ್ದು, ಒಗ್ಗಟ್ಟಾಗಿ ಸವಾಲನ್ನು ಎದುರಿಸೋಣ ಎಂದರು. ಇದೇ ವೇಳೆ, ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪದಗ್ರಹಣ ಮಾಡಿದ್ದಾರೆ. ಅಮೆರಿಕಾದ ಇತಿಹಾಸದಲ್ಲಿಮೊದಲೆಂಬಂತೆ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.