ಕೇಂದ್ರ ಗೃಹ ಸಚಿವರಿಂದ ಕ್ಷಿಪ್ರ ಕಾರ್ಯ ಪಡೆ ಘಟಕ ಶಂಕುಸ್ಥಾಪನೆ.

ಹಿವಮೊಗ್ಗ: ಭದ್ರಾವತಿ ಡಿಎಆರ್ ಮೈದಾನದಲ್ಲಿ ಕ್ಷಿಪ್ರ ಕಾರ್ಯ ಪಡೆ (ಆರ್‍ಎಎಫ್) 97 ಬೆಟಾಲಿಯನ್ ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಭದ್ರಾವತಿಯಲ್ಲಿ ಆರ್. ಎ. ಎಫ್ ಬೆಟಾಲಿಯನ್ ಸ್ತಾಪನೆಯಿಂದ ಇಡೀ ದಕ್ಷಿಣ ಭಾರತದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಾಯಕವಾಗಲಿದೆ. ಇಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಾಣವಾಗಲಿದ್ದು, ರಾಜ್ಯ ಸರಕಾರ 50ಎಕ್ರೆ ಜಮೀನು ನೀಡಿದೆ. ಇಲ್ಲಿ ಸುಸಜ್ಜಿತವಾದ ವಸತಿಗೃಹಗಳು, ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ, ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾಂಗಣ ನಿರ್ಮಾಣವಾಗಲಿದೆ. ಇದರ ಪ್ರಯೋಜನ ಸ್ಥಳೀಯರಿಗೂ ದೊರೆಯುವಂತೆ ಮಾಡಲಾಗುವುದು. ಸ್ಥಳೀಯರು ಇಲ್ಲಿನ ಎಲ್ಲಾ ಸೌಲಭ್ಯಗಳ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಇದೊಂದು ಐತಿಹಾಸಿಕ ದಿನ. ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ 97ಎಕ್ರೆ ಪ್ರದೇಶದಲ್ಲಿ ಆರ್‍ಎಎಫ್ ಘಟಕಕ್ಕೆ ರಾಜ್ಯ ಸರ್ಕಾರ 50ಎಕ್ರೆ ಪ್ರದೇಶ ನೀಡಿದೆ.

ಸಾರಿಗೆ ಸಂಪರ್ಕ ಉತ್ತಮವಾಗಿರುವ ಭದ್ರಾವತಿಯಲ್ಲಿ ಆರ್ ಎ ಎಫ್ ಘಟಕ ಸ್ಥಾಪನೆಯಿಂದ ತುರ್ತು ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಪಡೆಗಳನ್ನು ತರಿಸುವುದು ತಪ್ಪಲಿದೆ. ಇಲ್ಲಿ ಆರಂಬವಾಗಲಿರುವ ಘಟಕ ರಾಜ್ಯದ ಎಲ್ಲಾ ಜಿಲ್ಲೆಗಳು, ಕೇರಳದ ನಾಲ್ಕು, ಗೋವಾದ 2, ಪುದುಚೇರಿ ಮತ್ತು ಲಕ್ಷದ್ವೀಪದ ತಲಾ ಒಂದು ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ತುರ್ತು ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಆರ್‍ಎಎಫ್ ಕೈಜೋಡಿಸಲಿದೆ ಎಂದು ಹೇಳಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಅಶ್ವಥ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ,
ಶಾಸಕರಾದ ಸಂಗಮೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts