ಭಾಲ್ಕಿಯಲ್ಲಿ ಬಾಲಯೇಸು ಮಹೋತ್ಸವ; ಕಣ್ಮನ ಸೆಳೆದ ದೃಶ್ಯ ವೈಭಾವ

ಬೀದರ್: ಗುಲ್ಬರ್ಗಾ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರ ಭಾಲ್ಕಿ ನಗರದ ಬಾಲ ಯೇಸು ದೇವಾಲಯದಲ್ಲಿ ವಾರ್ಷಿಕ ಮಹೋತ್ಸವವು ಅದ್ದೂರಿಯಾಗಿ ನೆರವೇರಿತು. ನಾಡಿನಾದ್ಯಂತ ಬಾಲ ಎಸು ದೇವಾಲಯಗಳಲ್ಲಿ ವಾರ್ಷಿಕ ಉತ್ಸವ ಜರುಗಿದ್ದು ಬಾಲ್ಕಿಯಲ್ಲಿನ ಈ ಮಹೋತ್ಸವವು ವಿಶೇಷತೆಗಳಿಂದಾಗಿ ಗಮನಸೆಳೆಯಿತು. ಈ ಉತ್ಸವ ಧಾರ್ಮಿಕ ಕೈಂಕರ್ಯಕ್ಕಷ್ಟೇ ಅಲ್ಲ ಸಾಮಾಜಿಕ ಕಾರ್ಯಕ್ರಮದಿಂದಲೂ ಸಾರ್ವಜನಿಕರ ಗಮನ ಕೇಂದ್ರೀಕರಿಸಿತು.

ಪ್ರತೀ ವರ್ಷವೂ ಈ ಬಾಲ ಯೇಸು ದೇಗುಲದಲ್ಲಿ ವಾರ್ಷಿಕ ಮಹೋತ್ಸವ ವಿರಂಭಣೆಯಿಂದ ನೆರವೇರುತ್ತಿದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ಕೆಲವು ಮಾನದಂಡಗಳನ್ನು ಅನುಸರಿಸಿದ್ದರಿಂದಾಗಿ ಭಕ್ತರಿಗೆ ಅಲ್ಪ ಮಟ್ಟಿನ ಅನಾನುಕೂಲತೆಗಳು ಉಂಟಾಗಿದೆಯಾದರೂ ಭಕ್ತ ಸಮೂಹವು ದೇವಾಲಯದ ನಿಯಮಗಳನ್ನು ಪಾಲಿಸಿ ಸಹಕಾರ ನೀಡಿದ್ದಾರೆ.

ಅನನ್ಯ ಪೂಜಾ ವೈವಿಧ್ಯ

ಬಾಲ ಎಸು ಮಹೋತ್ಸವ ಸಂದರ್ಭದಲ್ಲಿ ಫಾದರ್ ಕರುನೇಶ್ ದೇವರ ವಾಕ್ಯವನ್ನು ಬೋಧಿಸಿದರೆ, ನಂತರ ಫಾದರ್ ಜಾರ್ಜ್ ಮಾರ್ಗದರ್ಶನದಲ್ಲಿ ಆರಾಧನೆ ವೈಭವ ಭಕ್ತರ ಮನಸೆಳೆಯಿತು. ಪ್ರಧಾನ ಯಾಜಕ ರಾಗಿ ಫಾದರ್ ಸ್ಟ್ಯಾನಿ ಲೋಬೊ ಅವರು ಸಾಂಭ್ರಮಿಕ ದಿವ್ಯಬಲಿಪೂಜೆಯನ್ನು ಅರ್ಪಿಸಿದರು.

ಬಲಿಪೂಜೆಯ ನಂತರ ಸಾಮಾಜಿಕ ಕೈಂಕರ್ಯದ ಚಟುವಟಿಕೆಗಳಿಗೆ ಈ ಮಹೋತ್ಸವ ಸಾಕ್ಷಿಯಾಯಿತು. ಶಿಕ್ಷಣದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಶಾಲು ಹಾಗೂ ನೆನಪಿನ ಕಾಣಿಕೆಯನ್ನು ಕೊಡುವ ಮುಖಾಂತರ ಸನ್ಮಾನ ನೆರವೇರಿಸಿದ ಧರ್ಮಗುರು ಫಾದರ್ ಕ್ಲೇರಿ ಡಿಸೋಜರವರು ನಾಡಿನ ಒಳಿತಿಯಾಗಿ ಮಾಡುವ ಕೆಲಸಗಳಲ್ಲಿ ಯಶಸ್ವಿಯಾಗುವಂತೆ ಆಶೀರ್ವಧಿಸಿದರು.

ಸಾವಿರಾರು ಭಕ್ತರು ಬಾಲ ಏಸುವಿಗೆ ಪುಷ್ಪ ಸಮರ್ಪಿಸಿ, ಮೊಂಬತ್ತಿ ಬೆಳಗಿಸಿ ಇಷ್ಟಾರ್ಥ ಸಿದ್ದಿಗಾಗಿ ದೇವರ ಮೊರೆಹೋಗುತ್ತಿದ್ದ ಸುಂದರ ಕ್ಷಣ ಇಡೀ ದಿನ ಕಂಡುಬಂತು. ಫಾದರೇಶನ್ ಡಿಸೋಜರವರು ಮುಂದಾಳುತ್ವದಲ್ಲಿ ಸ್ವಯಂಸೇಕರ ತಂಡ ಈ ಮಹೋತ್ಸವದ ಸಕಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿ ಗುಲ್ಬರ್ಗಾ ಧರ್ಮಪ್ರಾಂತ್ಯದ ಜನರ ಮೆಚ್ಚುಗೆಗೆ ಪಾತ್ರರಾದರು.

Related posts