ಕೇಂದ್ರ, ರಾಜ್ಯ ಸರಕಾರಗಳಿಂದ ಕೃಷಿಕರ ಪರ ಆಡಳಿತ; ನಳಿನ್‌ಕುಮಾರ್ ಕಟೀಲ್

ಬೆಂಗಳೂರು: ಕೇಂದ್ರ ಸರಕಾರವು ಕಿಸಾನ್ ಸಮ್ಮಾನ್, ಫಸಲ್ ಬಿಮಾ ಸೇರಿದಂತೆ ಅತ್ಯುತ್ತಮ ಯೋಜನೆಗಳನ್ನು ಜಾರಿಗೊಳಿಸಿ ರೈತಪರ ಸರಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಪಾರ್ಟಿಯ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಹಾಗೂ ರೈತಪರ ಕಾರ್ಯಕ್ರಮಗಳ ವಿಷಯವನ್ನು ಜನರ ಗಮನಕ್ಕೆ ತರುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಕೇಂದ್ರದ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮಾರ್ ಅವರು ಈಗಾಗಲೇ ರೈತರಿಗೆ ಒಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿನ ಅಂಶಗಳನ್ನೂ ರೈತರಿಗೆ ಮನದಟ್ಟು ಮಾಡಬೇಕು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಸಾಲಮನ್ನಾದ ಸಾಧನೆಯೂ ಯಡಿಯೂರಪ್ಪ ಅವರಿಗೇ ಸಲ್ಲುತ್ತದೆ. ಈ ಎಲ್ಲಾ ವಿಚಾರಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಪೇಜ್ ಪ್ರಮುಖ್, ಪಂಚರತ್ನ, ಪಂಚಸೂತ್ರಗಳ ಅನುಷ್ಠಾನ, ವಿರೋಧ ಪಕ್ಷಗಳೂ ಮೆಚ್ಚುವ ರೀತಿಯಲ್ಲಿ ನಡದ ಗ್ರಾಮ ಸ್ವರಾಜ್ಯ ಸಮಾವೇಶಗಳ ಮೂಲಕ ಪಂಚಾಯತ್ ಚುನಾವಣೆಗೆ ಪಕ್ಷ ಸಜ್ಜುಗೊಂಡಿದೆ. ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿಯ ಬೆಂಬಲಿತರು ಅತಿ ಹೆಚ್ಚು ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆ ಆಗಿರುವುದು ಪಕ್ಷವು ಗರಿಷ್ಠ ಸ್ಥಾನ ಪಡೆಯುವ ಮುನ್ಸೂಚನೆಯಾಗಿದೆ. ನಾನು ಆರೇಳು ಜಿಲ್ಲೆಗಳ ಪ್ರವಾಸ ಮಾಡಿ ಬಂದಿದ್ದು, ಈ ಬಾರಿ ಬಿಜೆಪಿ ಶೇಕಡಾ 80ಕ್ಕಿಂತ ಹೆಚ್ಚು ಪಂಚಾಯತ್‌ಗಳಲ್ಲಿ ಅಧಿಕಾರ ಪಡೆಯುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Related posts