ಭಜರಂಗ ದಳದಿಂದ ನಿಮ್ಮ ಧ್ವನಿವರೆಗೂ.. ಮಹೇಂದ್ರಕುಮಾರ್ ಇನ್ನಿಲ್ಲ

ಬೆಂಗಳೂರು: ಬಜರಂಗದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್ ಇನ್ನಿಲ್ಲ. ತೀವ್ರ ಹೃದಯಾಘಾತಕ್ಕೊಳಗಾದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಸಾಮಾಜಿಕ ಹೋರಾಟಗಾರರೂ ಆಗಿದ್ದ ಮಹೇಂದ್ರ ಕುಮಾರ್ ಕರಾವಳಿ- ಮಲೆನಾಡಲ್ಲಿ ಹಿಂದೂ ಸಂಘಟನೆಗಳನ್ನು ಮುನ್ನಡೆಸಿದ್ದವರು. ಬದಲಾದ ಪರಿಸ್ಥಿತಿಯಲ್ಲಿ ಸಂಘ ಪರಿವಾರದಿಂದ ದೂರ ಸರಿದ ಅವರು ಕಳೆದ ಕೆಲ ವರ್ಷಗಳಿಂದ ಜಾತ್ಯತೀತ ಜನತಾ ದಳದೊಂದಿಗೆ ಗುರುತಿಸಿಕೊಂಡಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮಹೇಂದ್ರ ಕುಮಾರ್ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಬೆಳಿಗ್ಗೆ ೫.೩೦ ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.

ಭಜರಂಗ ದಳದಿಂದ ನಿಮ್ಮ ಧ್ವನಿವರೆಗೂ..

ಹಲವು ದಶಕಗಳ ಕಾಲ ಹಿಂದೂ ಸಂಘಟನೆಯ ನಾಯಕರಾಗಿದ್ದ ಮಹೇಂದ್ರ ಕುಮಾರ್ ಕಟ್ಟಾ ಹಿಂದೂವಾದಿಯಾಗಿದ್ದರು. ಭಜರಂಗ ದಳದ ಕರ್ನಾಟಕ ಪ್ರಾಂತ ನಾಯಕರಾಗಿದ್ದ ಅವರ ವಿರುದ್ಧ ಚರ್ಚ್ ಮೇಲಿನ ದಾಳಿ ಪ್ರಕರಣದಲ್ಲಿ ಆರೋಪವೂ ದಾಖಲಾಗಿತ್ತು. ಸಂಘದ ಪ್ರಮುಖರ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸಂಘದ ಗರಡಿಯಿಂದ ದೂರ ಸರಿದ ಮಹೇಂದ್ರ ಕುಮಾರ್ ಜೆಡಿಎಸ್ ಜೊತೆ ಗುರುತಿಸಿಕೊಂಡರು. ಜೆಡಿಎಸ್ ಪರವಾಗಿ ಹಲವು ಚರ್ಚೆ ಘೋಷ್ಠಿಗಳಲ್ಲಿ ಭಾಗಿಯಾತ್ತಾ ಕ್ರಮೇಣ ಅವರು ಸಂಘದ ವಿಚಾರಧಾರೆಯಿಂದಲೂ ತಾನು ದೂರ ಉಳಿದರು. ಇತ್ತೀಚಿನ ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟದ ಸಂದರ್ಭದಲ್ಲಿ ಅವರು ಮಂಚೂಣಿಯಲ್ಲಿದ್ದರು.

“ನಮ್ಮ ಧ್ವನಿ” ಎಂಬ ಸಂಘಟನೆ ಕಟ್ಟಿ, ಅದೇ ಹೆಸರಿನ ಯೂಟ್ಯೂಬ್ ಚಾನೆಲ್ ಮೂಲಕ ಪ್ರಗತಿಪರ ನಿಲುವುಗಳನ್ನು ಅವರು ಪ್ರತಿಪಾದಿಸುತ್ತಿದ್ದರು. ಈ ಯುಟ್ಯೂಬ್ ಚಾನೆಲ್ ಮೂಲಕ ಅಪಾರ ಸಾಂಹ್ಯೆಯಲ್ಲಿ ಅಭಿಮಾನಿಗಳನ್ನೂ ಅವರು ಹೊಂದಿದ್ದರು.

Related posts