‘ಲವ್ ಜಿಹಾದಿ’ಯಲ್ಲಿ ಅಸಲಿ ಯಾರು..? ಸೋಶಿಯಲ್ ಮೀಡಿಯಾದಲ್ಲಿ ಕ್ರಾಸ್ ಫೈರ್?

ಕರಾವಳಿಯ ಸಿನಿಮಾ ಮಂದಿಯ ಮೇಲಿನ ಸಿಟ್ಟೋ? ಅಥವಾ ರಹಸ್ಯ ವಿಚಾರಕ್ಕೆ ತೀರಿಸಿದ ಸೇಡು ಇರಬಹುದೇ? ಲವ್ ಜಿಹಾದಿ ಆರೋಪದ ಅಸ್ತ್ರ ಬಿಜೆಪಿ ಪಾಳಯದಲ್ಲೇ ತಳಮಳಕ್ಕೆ ಕಾರಣವಾಗಿದೆ.

‘ಲವ್ ಜಿಹಾದ್’ ವಿರುದ್ಧ ಕೇಸರಿ ಕಾರ್ಯಕರ್ತರು ಬಹುಕಾಲದಿಂದಲೇ ಸಮರ ನಿರತರಾಗಿದ್ದಾರೆ. ಈ ಅಸ್ತ್ರವನ್ನೇ ರಹಸ್ಯವಾಗಿ ಪ್ರಯೋಗಿಸಿದ ಆರೆಸ್ಸೆಸ್ ವಿರೋಧಿಗಳು ಬಿಜೆಪಿ ಕಾರ್ಯಕರ್ತರನ್ನೇ ಗುರಿಯಾಗಿಸಿದ್ದಾರೆ. ಹಿಂದೂ ಕಾರ್ಯಕರ್ತರ ಸೋಗಿನಲ್ಲಿ ವಿರೋಧಿಗಳು ಬಿಜೆಪಿ ಕಾರ್ಯಕರ್ತರ ಮೇಲೆಯೇ ಲವ್ ಜಿಹಾದಿಯ ಕಥೆ ಕಟ್ಟಿ ವಾಟ್ಸಾಪ್’ನಲ್ಲಿ ಹಾಕಿದ ಪೋಸ್ಟನ್ನು ತಾರಾತುರಿಯಲ್ಲೇ ಕೇಸರಿ ಕಾರ್ಯಕರ್ತರು ಶೇರ್ ಮಾಡಿ ಹಿಂದೂ ಕಾರ್ಯಕರ್ತರನ್ನೇ ಪೇಚಿಗೆ ಸಿಲುಕಿಸಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗುವಷ್ಟರಲ್ಲಿ ತಮ್ಮ ಸಂಘಟನೆಯ ಕಾರ್ಯಕರ್ತರೇ ಅವಮಾನ ಅನುಭವಿಸುವಂತಾಯಿತು.

‘ಭೋಜರಾಜ್ ಎಂಬಿಬಿಎಸ್’ ಚಿತ್ರೀಕರಣ ಸನ್ನಿವೇಶ

ಏನಿದು ಪ್ರಕರಣ?

ಬಣ್ಣ ಬಣ್ಣದ ಸಿನಿಮಾ ಖ್ಯಾತಿಯ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಇದೀಗ ತುಳು ಸಿನಿಮಾ ಕ್ಷೇತ್ರದಲ್ಲೂ ಕೆಲವು ಸಿನಿಮಾ ಮಾಡುತ್ತಿದ್ದಾರೆ. ‘ಭೋಜರಾಜ್ ಎಂಬಿಬಿಎಸ್’, ‘ಭಟ್ಕಳ್ ಟು ಮುಂಬೈ’ ಇತ್ಯಾದಿ ಚಿತ್ರಗಳ ತಯಾರಿ ಬಿರುಸಿನಿಂದ ಸಾಗಿರುವಾಗಲೇ ವಾಟ್ಸಾಪ್’ನಲ್ಲಿ ವಿವಾದಿತ ಪೋಸ್ಟ್ ಹರಿದಾಡಿದೆ. ಅದು ಲವ್ ಜಿಹಾದಿಯ ಆರೋಪದ ವಿಚಾರ.

ಪ್ರಾಣೇಶ್ ಶೆಟ್ಟಿ ಹಾಗೂ ಇಸ್ಮಾಯಿಲ್ ಮೂಡುಶೆಡ್ಡೆಯವರು ಲವ್ ಜಿಹಾದಿಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆಂಬುದು ಆ ವಿವಾದಿತ ಪೋಸ್ಟ್’ನಲ್ಲಿನ ಆರೋಪ. ಈ ಪೋಸ್ಟ್’ನಲ್ಲಿ ನಟಿಯರ ಹೆಸರನ್ನೂ ಉಲ್ಲೇಖಿಸಲಾಗಿದೆ. ಹಿಂದೂ ಕಾರ್ಯಕರ್ತರು ಪೋಸ್ಟ್ ಮಾಡಿದ ರೀತಿಯಲ್ಲೇ ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದೇ ತಡ, ಬಿಜೆಪಿ ಹಾಗೂ ಭಜರಂಗದಳದ ಕಾರ್ಯಕರ್ತರು ವಿವಿಧ ಗ್ರೂಪ್’ಗಳಿಗೆ ಶೇರ್ ಮಾಡಿದ್ದಾರೆ.

ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಂತೆಯೇ Mangalore Hindu News Bureau ಹೆಸರಲ್ಲಿ ಮತ್ತೊಂದು ಪೋಸ್ಟ್ ಪ್ರತ್ಯಕ್ಷವಾಗಿದೆ. ‘ಲವ್ ಜಿಹಾದ್’ – ಜಿಹಾದಿಗಳ ಕುತಂತ್ರಕ್ಕೆ ನಿರ್ದೇಶಕನ ಹೆಸರಿಗೆ ಮಸಿ’ ಎಂಬ ಟೈಟಲ್’ನಲ್ಲಿ ಹಾಕಲಾದ ಈ ಸಂದೇಶದಲ್ಲಿ ನಿರ್ದೇಶಕ ಇಸ್ಮಾಯಿಲ್ ಅವರು ಹಿಂದೂ ರಾಯಭಾರಿಗಳ್ಲಿ ಒಲ್ಲೊಬ್ಬರು ಎಂಬಂತೆ ಹೇಳಲಾಗಿದೆ. ಆದರೆ ಅಷ್ಟರಲ್ಲೇ  ಸಿನಿಮಾ ತಂಡ ನೋವಿನ ಮಡುವಲ್ಲಿ ಬಿದ್ದಿತ್ತು.

ಈ ನಡುವೆ, ಹಳೆಯ ಪೋಸ್ಟ್’ನಲ್ಲಿ ಮಂಗಳೂರು ಹಿಂದೂ ಬ್ಯುರೋ ಎಂಬುದನ್ನು ‘Mangaloore Hindu News Bureau’ ಎಂದು ಬರೆಯಲಾಗಿತ್ತು. ಅದರಲ್ಲಿ Mangaloore ಎಂದು ತಪ್ಪಾಗಿ ಸ್ಪೆಲ್ಲಿಂಗ್ ಬಳಸಲಾಗಿತ್ತು. ಅಲ್ಲೇ ಗೊತ್ತಾಗಿದ್ದು ಇದು ಒಂದು ಫೇಕ್ ಎಂಬುದು

ಯಾರಿವರು ಹಿಂದೂ ರಾಯಭಾರಿಗಳು?

ಸಿನಿಮಾ ನಟ ಇಸ್ಮಾಯಿಲ್ ಮೂಡುಶೆಡ್ಡೆ ಕಳೆದೆರಡು ದಶಕಗಳಿಂದಲೂ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರ ಜೊತೆ ಗುರುತಿಸಿಕೊಂಡವರು. ಸಂಸದರೂ ಆದ ನಳಿನ್ ಕುಮಾರ್ ಕಟೀಲ್ ಅವರ ಆಪ್ತರಾಗಿರುವ ಇಸ್ಮಾಯಿಲ್, ಈ ಹಿಂದಿನ ಹಲವು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದಾರೆ. ಈ ವಿವಾದಿತ ಪೋಸ್ಟ್’ನಲ್ಲಿ ಹೆಸರು ಪ್ರಾಣೇಶ್. ಇವರು ಎಬಿವಿಪಿ, ಬಿಜೆಪಿ ಹಾಗೂ ಸಂಘಪರಿವಾರದ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿರುವವರು. ಅಷ್ಟೇ ಅಲ್ಲ, ಈ ಪೋಸ್ಟ್’ನಲ್ಲಿ ಉಲ್ಲೇಖವಿರುವ ನಟಿಯರು ಕೂಡಾ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಕುಟುಂಬಗಳ ಸದಸ್ಯರು ಎಂಬುದು ಹಿಂದೂ ಸಂಘಟನೆಗಳ ಮುಖಂಡರ ಹೇಳಿಕೆ.

ಈ ನಡುವೆ, ವಿವಾದಿತ ಪೋಸ್ಟ್ ಕುರಿತಂತೆ ಸಾಲು ಸಾಲು ದೂರುಗಳು ಪೊಲೀಸ್ ಠಾಣೆಗಳ ಮೆಟ್ಟಿಲೇರಿವೆ. ನಟಿಯರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದರೆ, ಇಸ್ಮಾಯಿಲ್ ಅವರು ಸೈಬರ್ ಅಪರಾಧ ವಿಭಾಗ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಾಣೇಶ್ ಅವರು ತನಿಖೆಗಾಗಿ ವಾಮಂಜೂರು ಠಾಣೆಯ ಪೊಲೀಸರ ಮೊರೆ ಹೋಗಿದ್ದಾರೆ.  ವಿಶೇಷವೆಂದರೆ ಈ ದೂರುದಾರರು ವಾಟ್ಸಾಪ್’ನಲ್ಲಿ ವಿವಾದಿತ ಪೋಸ್ಟನ್ನು ಶೇರ್ ಮಾಡಿದ ಹಿಂದೂ ಕಾರ್ಯಕರ್ತರ ವಿರುದ್ಧ ದೂರು ಕೊಟ್ಟಿಲ್ಲ. ಬದಲಾಗಿ ಹಿಂದೂ ಕಾರ್ಯಕರ್ತರ ದಿಕ್ಕು ತಪ್ಪಿಸಲು ಪಿತೂರಿ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

Related posts