ಮತ್ತೊಮ್ಮೆ ರಾಜ್ಯದಲ್ಲಿ ಅಮಿತ್ ಶಾ ಶಕ್ತಿಪ್ರದರ್ಶನ; ಬೆಳಗಾವಿಯಲ್ಲಿ ಜ.17ರಂದು ಬಿಜೆಪಿ ಬೃಹತ್ ಸಮಾವೇಶ

ಬೆಂಗಳೂರು: ಬೆಳಗಾವಿಯಲ್ಲಿ ಜನವರಿ 17ರಂದು ಬಿಜೆಪಿ ಬೃಹತ್ ಸಾರ್ವಜನಿಕ ಸಭೆs ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಚಿವರು, ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜನವರಿ 11ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗೋಪೂಜೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಜನಸೇವಕ ಸಮಾವೇಶದ ಉದ್ಘಾಟನೆ ನಡೆಯಲಿದೆ. ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಲ್ಲೂ ಬಿಜೆಪಿ ಅಧಿಕಾರ ಪಡೆಯುವ ದೃಷ್ಟಿಯಿಂದ ಮಹತ್ವದ ಹೆಜ್ಜೆ ಇದಾಗಿದೆ ಎಂದು ವಿವರ ನೀಡಿದರು.

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮತ್ತು ಉಪ ಮುಖ್ಯಮಂತ್ರಿ ಡಾ. ಅಶ್ವ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಐದು ತಂಡಗಳು ರಾಜ್ಯದಾದ್ಯಂತ ಜನವರಿ 11ರಿಂದ 13ರವರೆಗೆ ಜನಸೇವಕ ಸಮಾವೇಶದಲ್ಲಿ ಭಾಗವಹಿಸಲಿವೆ. ಪ್ರತಿದಿನ 10 ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ. ಪಕ್ಷದ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 13ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಪ್ರತಿಯೊಂದು ಜನಸೇವಕ ಸಮಾವೇಶದಲ್ಲಿ ಒಂದು ಸಾವಿರದಿಂದ ಮೂರು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ಪಕ್ಷದ ಸಂಘಟನೆ, ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ತಯಾರಿ ನಡೆಯಲಿದೆ ಎಂದರು.

Related posts