ಸಂಪುಟ ಸೇರಲು ಭರ್ಜರಿ ಪೈಪೋಟಿ; ಇವರೇ ಅದೃಷ್ಟವಂತರು

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಂಕ್ರಾಂತಿ ಆಚರಣೆಗೆ ತಯಾರಿಗೆ ಮುನ್ನ ಇದೀಗ ಸಂಪುಟ ವಿಸ್ತರಣೆಯ ಸಡಗರ ಮನೆಮಾಡಿದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಲಗಾರ ಬಿಎಸ್’ವೈ ಅವರು ಸಂಕ್ರಾಂತಿಗೆ ಮುನ್ನವೇ ಸಂಪುಟ ವಿಸ್ತರಣೆ ಮಾಡಲಿದ್ದು ಸಚಿವಾಕಾಂಕ್ಷಿಗಳಿಂದ ಲಾಬಿಯೂ ಬಿರುಸುಗೊಂಡಿದೆ. ಆದರೆ ಯಾರೆಲ್ಲಾ ಸಂಪುಟ ಸೇರಲಿದ್ದಾರೆ ಎಂಬುದೇ ಈಗಿರುವ ಕುತೂಹಲ.

ಎಂ.ಟಿ.ಬಿ.ನಾಗರಾಜ್, ಶಂಕರ್, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೀಶ್ವರ್, ಪ್ರೀತಮ್ ಗೌಡ, ಯತ್ನಾಳ್, ಉಮೇಶ್ ಕತ್ತಿ, ಹಾಲಪ್ಪ ಆಚಾರ್, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಸುನಿಲ್ ಕುಮಾರ್ ಹೆಸರುಗಳು ಮುಂಚೂಣಿಯಲ್ಲಿವೆ. ದತ್ತಾತ್ರೇಯ ಪಟೇಲ್ ರೇವೂರ, ಅಂಗಾರ, ರಾಮದಾಸ್, ರೂಪಾಲಿ ನಾಯಕ್, ಎಂ.ಪಿ.ಕುಮಾರಸ್ವಾಮಿ ಮೊದಲಾದವರ ಹೆಸರೂ ಕೇಳಿಬರುತ್ತಿವೆ.

ಭಾನುವಾರ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಸಧ್ಯವೇ ಲೋಕಸಭಾ ಉಪಚುನಾವಣೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಉಪಸಮರ ನಡೆಯಲಿರುವುದರಿಂದ ಸಂಪುಟ ವಿಸ್ತರಣೆ ಮಾಡಿ ಅತೃಪ್ತರನ್ನು ಸಂತುಷ್ಟಗೊಳಿಸುವ ಅನಿವಾರ್ಯತೆಯನ್ನು ವಿವರಿಸಿದ್ದಾರೆನ್ನಲಾಗಿದೆ.

ಈ ಸಂಗತಿಗಳ ಬಗ್ಗೆ ಮುಂದೆ ನೋಡೋಣ ಎಂದು ಹೇಳಿ ಯಡಿಯೂರಪ್ಪ ಅವರನ್ನು ಕಳುಹಿಸಿಕೊಟ್ಟ ವರಿಷ್ಠರು, ಸಿಎಂ ಬೆಂಗಳೂರು ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ಕೆರೆ ಮಾಡಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆನ್ನಲಾಗಿದೆ.
ಈ ಕುರಿತಂತೆ ವಿಮಾನ ನಿಲ್ದಾಣದಲ್ಲೇ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಯಡಿಯೂರಪ್ಪ, ಆರೇಳು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಸುಳಿವು ನೀಡಿದರು.

ಅದೃಷ್ಟವಂತರು ಯಾರು?

ಎಂ.ಟಿ.ಬಿ.ನಾಗರಾಜ್, ಶಂಕರ್, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೀಶ್ವರ್, ಪ್ರೀತಮ್ ಗೌಡ, ಯತ್ನಾಳ್, ಉಮೇಶ್ ಕತ್ತಿ, ಹಾಲಪ್ಪ ಆಚಾರ್, ಮುರುಗೇಶ್ ನಿರಾಣಿ ಸಹಿತ ಹಲವಾರು ಮಂತ್ರಿಗಿರಿಗ್ಗಿ ಲಾಬಿ ನಡೆಸುತ್ತಿದ್ದಾರೆ. ಈ ಪೈಕಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸಿರುವ ಎಂ.ಟಿ.ಬಿ.ನಾಗರಾಜ್ ಹಾಗೂ ಶಂಕರ್ ಸಂಪುಟ ಸೇರುವುದು ಖಚಿತ ಎನ್ನಲಾಗಿದೆ. ಆಪರೇಷನ್ ಕಮಲದಲ್ಲಿ ಮಹತ್ವದ ಪಾತ್ರ ವಹಿಸಿರುವ ಸಿ.ಪಿ.ಯೋಗೀಶ್ವರ್ ಹಾಗೂ ಅರವಿಂದ ಲಿಂಬಾವಳಿ ಕೂಡಾ ಮತ್ರಿ ಸ್ಥಾನ ಅಲಂಕರಿಸುವ ಸಾಧ್ಯತೆಗಳೇ ಹೆಚ್ಚು. ಇನ್ನುಳಿದಂತೆ, ಬಹುಪಾಲು ಸಚಿವರು ಬೆಳಗಾವಿಯವರೇ ಇರುವಾಗ ಉಮೇಶ್ ಕಟ್ಟಿಗೆ ಅವಕಾಶ ಸಿಗುತ್ತಾ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಜೊತೆಗೆ ಮುರುಗೇಶ್ ನಿರಾಣಿ ಮತ್ತು ಯತ್ನಾಳ್ ಪೈಕಿ ಯಾರನ್ನು ಆಯ್ಕೆ ಮಾಡುವುದೆಂಬುದು ಬಿಜೆಪಿ ನಾಯಕರಿಗೂ ಕಬ್ಬಿಣದ ಕಡಲೆ ಎಂಬಂತಿದೆ. ಇನ್ನೊಂದೆಡೆ, ಬಿಎಸ್’ವೈ ಆಪ್ತ ರೇಣುಕಾಚಾರ್ಯ, ಸುನಿಲ್ ಕುಮಾರ್, ಹಾಗೂ ಹಾಲಪ್ಪ ಆಚಾರ್ ಅವರೂ ಸಚಿವಾಕಾಂಕ್ಷಿಗಳಾಗಿದ್ದು ಈ ಪೈಕಿ ಅದೃಷ್ಟವಂತರು ಯಾರು ಎಂಬುದು ಬುಧವಾರ ಗೊತ್ತಾಗಲಿದೆ.

Related posts