ಬಿಎಸ್’ವೈ ಸರ್ಕಾರಕ್ಕೆ ಸಿಡಿ ಬಾಂಬ್ ಕಂಟಕ; ಕಮಲ ಪಾಲಯದಲ್ಲೂ ತಳಮಳ

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರಿಗೀಗ ಸಿಡಿ ಕಂಟಕ ಎದುರಾಗಿದೆ. ಸಂಪುಟ ವಿಸ್ತರಣೆಯ ಬೆನ್ನಲೇ ಮಂತ್ರಿಸ್ಥಾನ ವಂಚಿತ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹೆಚ್.ವಿಶ್ವನಾಥ್ ಅವರು ಸಿಡಿ ಬಾಂಬ್’ಗಳನ್ನೂ ಹಾಕುತ್ತಿದ್ದು ಈ ಬೆಳವಣಿಗೆಯಿಂದಾಗಿ ಬಿಜೆಪಿ ನಾಯಕರು ಮುಜುಗರಕ್ಕೀಡಾಗಿದ್ದಾರೆ. ಅದರಲ್ಲೂ ಬ್ರಷ್ಟಾಚಾರದ್ದಷ್ಟೇ ಅಲ್ಲ ನೋಡಲೂ ಅಸಹ್ಯವಾದ ದೃಶ್ಯಗಳ ಸಿಡಿ ಇದೆ ಎಂದು ಯತ್ನಾಳ್ ಸಿಡಿಸಿರುವ ಬಾಂಬ್ ಕಮಲ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ.

ಏನಿದು ವೀಡಿಯೊ ಬಾಂಬ್ ಅಂದು ಯತ್ನಾಳ್ ಆಗಲೀ, ವಿಶ್ವನಾಥ್ ಅವರಾಗಲೀ ಸ್ಪಷ್ಟವಾಗಿ ಹೇಳುತ್ತಿಲ್ಲ. ಅದನ್ನು ಯಾವಾಗ ಬಿಡುಗಡೆ ಮಾಡುವುದಾಗಿಯೂ ಹೇಳಿಕೊಳ್ಳುತ್ತಿಲ್ಲ. ಒಟ್ಟಾರೆ ಸುದ್ದಿಗೆ ಗ್ರಾಸವಾಗುವ ರೀತಿ ಹೇಳಿಕೆಗಳನ್ನು ನೀಡುತ್ತಿದ್ದು ಪ್ರತಿಪಕ್ಷಗಳು ಕೂಡಾ ಬಿಜೆಪಿಯಲ್ಲಿನ ಬೆಳವಣಿಗೆಯನ್ನು ಕಾಡು ನೋಡುತ್ತಿವೆ.

ಸಿದ್ದರಾಮಯ್ಯ ಸವಾಲು

ಬಿಜೆಪಿಯಲ್ಲಿನ ರಹಸ್ಯ ಸಿಡಿ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ವಿವಾದ ಸೃಷ್ಟಿಸಿರುವಂತೆಯೇ ಈ ವಿದ್ಯಮಾನ ಬಗ್ಗೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತನ್ನದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಒಂದು ವೇಳೆ ನಕಲಿ ಸಿಡಿಯನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರೆ ಅಂತಹ ಪಿತೂರಿಯ ಹಿಂದಿರುವ ಸತ್ಯವನ್ನು ತಿಳಿಯಲು ಮುಖ್ಯಮಂತ್ರಿ ಕೂಡಲೇ ಪೊಲೀಸರಿಗೆ ದೂರು ನೀಡಲಿ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿಯವರೇ ಆರೋಪ ಹೊರಿಸುತ್ತಿರುವುದರಿಂದ ಅದರಲ್ಲಿ ಕೆಲವು ಸತ್ಯಗಳಿರಬಹುದು ಎಂದು ವಿಶ್ಲೇಷಣೆ ಮಾಡಿರುವ ಸಿದ್ದರಾಮಯ್ಯ, ಸತ್ಯಾಂಶ ಹೊರಗೆ ಬರಲು ಮುಖ್ಯಮಂತ್ರಿ ದೂರು ದಾಖಲಿಸಲಿ ಎಂದು ಒತ್ತಾಯಿಸಿದರು.

Related posts