ಬಿಎಸ್’ವೈ ಪಾಳಯಕ್ಕೆ ಜಿಗಿದರೇ ನಳಿನ್? ಸಿಎಂ ಯಡಿಯೂರಪ್ಪ ಸೇಫ್..!

ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆಗೆ ರಂಗ ಸಜ್ಜಾಗುತ್ತಿದೆ. ಆದರೆ ಆಡಳಿತಾರೂಢ ಬಿಜೆಪಿಯಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ಯಡಿಯೂರಪ್ಪ ಸಂಪುಟದ ವಿಸ್ತರಣೆಯಾಗಲೀ ಸರ್ಜರಿಯಾಗಲೀ ಗಜಪ್ರಸವವೇ ಸರಿ. ಆದರೆ ನಳಿನ್ ಕುಮಾರ್ ಅವರ ರಾಜಿಯ ನಡೆ ಸಿಎಂ ಬಿಎಸ್’ವೈ ಅವರಿಗೆ ವರದಾನವಾಗಲೂ ಬಹುದು.

ಪ್ರಸ್ತುತ ಬಿಜೆಪಿಯಲ್ಲೀಗ ಬಣ ರಾಜಕೀಯ ಇಲ್ಲ. ಒಂದೆಡೆ ಬಿ.ಎಲ್.ಸಂತೋಷ್ ಬೆಂಬಲಿಗರು ಸಮರ ವಿರಾಮಕ್ಕೆ ತೀರ್ಮಾನಿಸಿದ್ದಾರೆನ್ನಲಾಗಿದೆ. ಬಿ.ಎಲ್. ಸಂತೋಷ್ ಬಂಟ ನಳಿನ್ ಕುಮಾರ್ ಕೂಡಾ ಯಡಿಯೂರಪ್ಪ ಹಾಗೂ ವಿಜಯೇಂದ್ರ ಜೊತೆ ರಾಜಿಯಾಗಿದ್ದು ರಾಜ್ಯ ಸರ್ಕಾರದ ವಿಚಾರದಲ್ಲಿ ಯಾವುದೇ ತಕರಾರು ಎತ್ತಿಲ್ಲ. ಬಿಜೆಪಿಯು ಭ್ರಷ್ಟಾಚಾರ ನಿರ್ಮೂಲನೆಯ ಮಂತ್ರ ಪಠಿಸುತ್ತಲೇ ಇರುವಾಗ ಕೊರೋನಾ ಹಗರಣದ ಆರೋಪ ತಮ್ಮ ಪಕ್ಷದ ವರ್ಚಸ್ಸಿಗೆ ಕಳಂಕ ಎನಿಸಿದರೂ ಸಂಬಂಧಪಟ್ಟ ಸಚಿವರ ಬಗ್ಗೆ ಆಡಳಿತ ಪಕ್ಷದ ಸಾರಥಿ ನಳಿನ್ ಕುಮಾರ್ ಕಟೀಲ್ ಮೃದು ದೋರಣೆ ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ಮುನಿಸಿಕೊಂಡವರಿಂದಲೇ ಹೊಂದಾಣಿಕೆ..!

ಭಾರತೀಯ ಜನತಾ ಪಕ್ಷದಲ್ಲೀಗ ರಾಜಾಹುಲಿಯನ್ನು ನಡುಗಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಅವರ ಆಡಳಿತಾತ್ಮಕ ತಂತ್ರಗಾರಿಕೆಯೇ ಕಾರಣ. ವಿಜಯೇಂದ್ರ ಬಗ್ಗೆ ಮುನಿಸಿಕೊಂಡವರೇ ಇದೀಗ ಅವರ ಜೊತೆ ಹೊಂದಾಣಿಕೆ ನಡೆಸುತ್ತಿರುವುದೇ ಕುತೂಹಲಕಾರಿ ಬಳವಣಿಗೆ.

ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆಪರೇಷನ್ ಕಮಲಕ್ಕೆ ಗುರಿಯಾದವರಿಗೆ ಹಾಗೂ ಅದರ ಹಿಂದಿರುವ ನಾಯಕರಿಗೆ ಸಚಿವ ಸ್ಥಾನ ಕೊಡಲಾಗಿತ್ತು. ಆಪರೇಷನ್ ಕಮಲದಲ್ಲಿ ಮುಂಚೂಣಿಯಲ್ಲಿದ್ದ ಅಶ್ವತ್ಥನಾರಾಯಣ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿಸಿ, ಉತ್ತಮ ಖಾತೆಗಳನ್ನೂ ಹಂಚಲಾಗಿತ್ತು. ರೇಣುಕಾಚಾರ್ಯ, ಮೋಹನ್ ಲಿಂಬಿಕಾಯಿ, ಮರಂಕಲ್, ಸಂತೋಷ್ ಮೊದಲಾದ ತಮ್ಮ ಆಪ್ತರಿಗೆ ಸಂಪುಟ ದರ್ಜೆಯ ಸ್ಥಾನಮಾನಗಳನ್ನೂ ಬಿಎಸ್’ವೈ ಕೊಟ್ಟಾಗ ಮೂಲ ಬಿಜೆಪಿಗರು ಅಸಮಾಧಾನ ಹೊರ ಹಾಕಿದ್ದರು. ಆ ಅತೃಪ್ತರಿಗೆ ಬೆಂಗಾವಲಾಗಿದ್ದ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇದೀಗ ಬದಲಾದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಆಪ್ತರ ಪರ ನಿಂತಿದ್ದಾರೆನ್ನಲಾಗಿದೆ. ಈ ಕಾರಣಕ್ಕಾಗಿಯೇ ಅಶ್ವತ್ಥ ನಾರಾಯಣ್ ಹಾಗೂ ಶ್ರೀರಾಮುಲು ಅವರ ಖಾತೆಯಡಿ ಬರುವ ಇಲಾಖೆಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮದ ಆರೋಪ ಬಂದಾಗಲೂ ನಳಿನ್ ಕುಮಾರ್ ಅವರು ಆರೋಪ ಮಾಡಿದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆಯೇ ಹೊರತು, ಪ್ರಕರಣದ ಬಗ್ಗೆ ಪರಾಮರ್ಶೆ ನಡೆಸಿಲ್ಲವೇಕೆ ಎಂದು ಬಿಜೆಪಿ ಮಂದಿಯೇ ಪ್ರಶ್ನಿಸಲಾರಂಭಿಸಿದ್ದಾರೆ.

ಇನ್ನೊಂದೆಡೆ ನಳಿನ್ ಮತ್ತು ಬಿಸ್’ವೈ ಅವರ ಒಪ್ಪಂದ, ಪಕ್ಷದ ರಾಷ್ಟ್ರೀಯ ನಾಯಕ ಬಿ.ಎಲ್. ಸಂತೋಷ್ ಅವರಿಗೂ ಇರುಸು ಮುರುಸು ಉಂಟುಮಾಡಿದೆ ಎನ್ನಲಾಗುತ್ತಿದೆ. ಅದೇನೇ ಆದರೂ ಸದ್ಯದ ಮಟ್ಟಿಗೆ ಯಡಿಯೂರಪ್ಪ ಸೇಫ್ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ.. ಸಹಾಯ ಹಸ್ತ: ಅತ್ತ ರಾಜೇಶ ‘ನಾಯಕ’.. ಇತ್ತ ಡಿಕೆಶಿ ‘ಹೀರೋ’ 

 

Related posts