ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ; ಬಿ.ಸಿ.ಪಾಟೀಲ್

ಹಾವೇರಿ: ಕಾಂಗ್ರೆಸ್ ಈಗ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಹಿರೆಕೆರೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಹೇಳುವುದೊಂದು ಮಾಡುವುದು ಇನ್ನೊಂದು. 2019 ರಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯಿದೆ ತಿದ್ದುಪಡಿ ಬಗ್ಗೆ ಸ್ಪಷ್ಟವಾಗಿ ಹೇಳಿತ್ತು. ಅಲ್ಲದೇ ಭೂ ಸುಧಾರಣಾ ಕಾಯಿದೆ ತೆಗೆಯುವ ಬಗ್ಗೆ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದರು. ಅವರು ಹೇಳಿದಂತೆಯೇ ಈಗ ಕಾಯಿದೆಯನ್ನು ತಿದ್ದುಪಡಿ ಮಾಡಲಾಗಿದೆ. ಕಾಂಗ್ರೆಸ್ ನಾಯಕರೇ 79 ಎ ಮತ್ತು ಬಿಯನ್ನು ಅನ್ನು ಕೈಬಿಡಬೇಕೆಂದು ವಿಧಾನಸಭೆಯಲ್ಲಿಯೇ ಹೇಳಿದ್ದರು. ಅದು ವಿಧಾನಸಭೆಯಲ್ಲಿ ದಾಖಲೆಯೂ ಆಗಿದೆ. ಆದರೆ ಈಗ ರಾಜಕೀಯ ದುರುದ್ದೇಶಕ್ಕಾಗಿ ವಿರೋಧಿಸುತ್ತಿದೆ. ಕಾಂಗ್ರೆಸ್ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ಸಣ್ಣ ರೈತನಿಗೂ ಸಹ ಅನುಕೂಲವಾಗುವಂತೆ ಕೃಷಿಕಾಯಿದೆಗಳನ್ನು ತಂದಿದ್ದಾರೆ. ಆದರೆ ವಿನಾಕಾರಣ ರಾಜಕೀಯ ದುರುದ್ದೇಶಕ್ಕಾಗಿ ಇದನ್ನು ಕಾಂಗ್ರೆಸ್ ಜೆಡಿಎಸ್ ವಿರೋಧಿಸುತ್ತಿವೆ ಎಂದರು.

ಭೂ ಸುಧಾರಣೆ ಕಾಯಿದೆ ತಿದ್ದುಪಡಿಯಿಂದ ರಾಜ್ಯದಲ್ಲಿ ಪಾಳುಬಿದ್ದಿರುವ 30-40 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಯಲು ಸಾಧ್ಯವಾಗುತ್ತದೆ. ಕೃಷಿಗೆ ಉತ್ತೇಜನ ನೀಡಲು ಭೂಕಾಯಿದೆಗೆ ತಿದ್ದುಪಡಿಯಾಗಿದೆ. ಇದರಿಂದ ಯುವಕರಿಗೆ ಉದ್ಯೋಗವಕಾಶಗಳು ಹೆಚ್ಚಾಗಲಿವೆ ಎಂದು ಬಿ.ಸಿ.ಪಾಟೀಲರು ಅಭಿಪ್ರಾಯ ವ್ಯಕ್ತಪಡಿಸಿದರು.

Related posts