20 ದಿನ‌ ಸಂಪೂರ್ಣ ಲಾಕ್ ಡೌನ್ ಮಾಡಿ; ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಆತಂಕಕಾರಿ ಸನ್ನಿವೇಶವನ್ನು ಸೃಷ್ಟಿಸುತ್ತಿದೆ. ನಿಯಂತ್ರಣಕ್ಕೆ ಬಾರದಿರುವುದರಿಂದಾಗಿ ಸರ್ಕಾರ ಕೂಡಾ ಸಂದಿಗ್ಧ ಸ್ಥಿತಿಯಲ್ಲಿದೆ.

ಈ ನಡುವೆ, ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಲಿದ್ದು, ಕೆಆರ್ ಮಾರುಕಟ್ಟೆ, ಕಲಾಸಿಪಾಳ್ಯ, ಚಿಕ್ಕಪೇಟೆ ಮತ್ತು ಚಾಮರಾಜಪೇಟೆ ಏರಿಯಾಗಳನ್ನು ಜೂನ್ 30ರವರೆಗೆ ಸೀಲ್ ಡೌನ್ ಮಾಡಲು ಸರ್ಕಾರ ಮುಂದಾಗಿದೆ.
ಇದೇ ವೇಳೆ ಕೆಲವೊಂದು ಕಡೆ ಮಾತ್ರವಲ್ಲ ಇಡೀ ಬೆಂಗಳೂರನ್ನು ಸೀಲ್’ಡೌನ್ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವೇ ಪ್ರದೇಶಗಳಲ್ಲಿ ಸೀಲ್ ಡೌನ್ ಲಾಕ್ ಡೌನ್ ಮಾಡಿದರೆ ಪ್ರಯೋಜನವಿಲ್ಲ.‌ ಬೆಂಗಳೂರು ನಿವಾಸಿಗಳು ಬದುಕುಳಿಯಬೇಕಾದರೆ ಈ ಕೂಡಲೇ ಕನಿಷ್ಟ 20 ದಿನ‌ ಸಂಪೂರ್ಣ ಲಾಕ್ ಡೌನ್ ಮಾಡಿ. ಇಲ್ಲವಾದಲ್ಲಿ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ. ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕತೆಯಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಡವರು, ಕಾರ್ಮಿಕರಿಗೆ ಕೂಡಲೇ ಪಡಿತರ ವಿತರಿಸಿ. ರಾಜ್ಯದ 50 ಲಕ್ಷ ಮಂದಿ ಶ್ರಮಿಕ ವರ್ಗಕ್ಕೆ ತಲಾ ಐದು ಸಾವಿರ ರೂಪಾಯಿ ಪರಿಹಾರ ನೀಡಬೇಕು. ಚಾಲಕರು, ನೇಕಾರರು, ಮಡಿವಾಳರು ಸೇರಿದಂತೆ ವಿವಿಧ ವರ್ಗಕ್ಕೆ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವ ಪರಿಹಾರ ದಕ್ಕಿಲ್ಲ ಎಂದೂ ಅವರು ಸರ್ಕಾರದ ಗಮನಸೆಳೆದಿದ್ದಾರೆ.

ಬರೀ ಪ್ಯಾಕೇಜ್ ಘೋಷಣೆ ಮಾಡಿದರೆ ಸಾಲದು. ಅದರ ಅನುಷ್ಠಾನಕ್ಕೆ ತಕ್ಷಣ ಕಾರ್ಯೋನ್ಮುಖವಾಗಬೇಕು. ಪ್ಯಾಕೇಜ್ ಘೋಷಣೆ ಮಾಡಿ, ಸರ್ಕಾರ ಅಂಗೈಯಲ್ಲಿ ಅರಮನೆ ತೋರಿಸಬಾರದು ಎಂದೂ ಕುಮಾರಸ್ವಾಮಿಯವರು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

Related posts