ಶಿಕ್ಷಕರಿಗೆ ಸೋಂಕು.. ವಿದ್ಯಾರ್ಥಿಗಳು ಸೇಫ್.. ಪೋಷಕರಿಗೆ ರಿಲೀಫ್..

ಬೆಂಗಳೂರು: ಕೋವಿಡ್ ಆತಂಕದ ನಡುವೆಯೇ ರಾಜ್ಯದಲ್ಲಿ ಹತ್ತನೇ ಹಾಗೂ ಪಿಯುಸಿ ತರಗತಿಗಳು ಆರಂಭವಾಗಿದ್ದು ಕೆಲವೆಡೆ ಶಿಕ್ಷಕರಿಗೆ ಹಾಗೂ ಶಾಲಾ ಸಿಬ್ಬಂದಿಗೆ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಆದರೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆತಂಕ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಬಾಗಲಕೋಟೆ ಜಿಲ್ಲೆಯ ಐವರು ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರು ಶಾಲಾರಂಭಕ್ಕೂ ಮುನ್ನವೇ ಕೊರೋನಾ ಪರೀಕ್ಷೆಯ ಫಲಿತಾಂಶ ಬಂದಿದ್ದರಿಂದ ಆ ಶಿಕ್ಷಕರು ಕ್ವಾರಂಟೈನ್‍ನಲ್ಲಿದ್ದು, ಮಕ್ಕಳ ಸಂಪರ್ಕಕ್ಕೆ ಬಂದಿಲ್ಲವಾದ್ದರಿಂದ ಶಾಲೆಗಳು ಸಮರ್ಪಕವಾಗಿ ನಡೆಯುತ್ತಿವೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕರು ಕೊರೋನಾ ಸೋಂಕಿಗೊಳಗಾಗಿದ್ದು ಅವರು ಗೃಹಪತ್ಯೇಕತೆಯಲ್ಲಿದ್ದಾರೆ. ಹುಕ್ಕೇರಿ ಶೈಕ್ಷಣಿಕ ಜಿಲ್ಲೆಯಲ್ಲಿ ನಾಲ್ವರು ಶಿಕ್ಷಕರು ಹೋಂ ಕ್ವಾರಂಟೈನ್‍ನಲಿದ್ದಾರೆ. ಕೊಪ್ಪಳ ಜಿಲ್ಲೆಯ ವಡಗನಹಳ್ಳಿ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಒಬ್ಬ ಶಿಕ್ಷಕರಿಗೆ ಕೊರೋನಾ ಪಾಸೀಟಿವ್ ಬಂದಿದ್ದು, ಶಾಲೆಯನ್ನು ಸ್ಯಾನಿಟೈಸೇಷನ್ ಮಾಡಿಸಲಾಗಿದೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಐವರು ಶಿಕ್ಷಕರಿಗೆ ಕೊರೋನಾ ಪಾಸಿಟೀವ್ ಬಂದಿದ್ದು ಅವರೆಲ್ಲ ಗೃಹ ಪ್ರತ್ಯೇಕತೆಯಲ್ಲಿದ್ದಾರೆ. ಚಿತ್ರದುರ್ಗ ಜಿಲ್ಲೆಯ ವಿವಿಧ ಐದು ಶಾಲೆಗಳ ಐವರು ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರೆಲ್ಲ ಗೃಹ ಪ್ರತ್ಯೇಕತೆಯಲ್ಲಿದ್ದಾರೆ. ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ಬೆಳಗಾವಿ ಜಿಲ್ಲೆ ಕಡೋಲಿ ಶಾಲೆಯ ಶಿಕ್ಷಕರಿಗೆ ಈ ತನಕ ಕರೋನಾ ಸೋಂಕು ದೃಢಪಟ್ಟಿಲ್ಲ. ಅವರಿಗೆ ಟೆಸ್ಟ್ ಆಗಿದ್ದು, ಫಲಿತಾಂಶ ಬರಬೇಕಿದೆ. ರ‍್ಯಾಪಿಡ್ ಅಂಟಿಜನ್ ಟೆಸ್ಟ್ ಪರೀಕ್ಷೆಯಲ್ಲಿ ನೆಗೆಟೀವ್ ಫಲಿತಾಂಶ ಬಂದಿದೆ. ಪೂರ್ಣ ಫಲಿತಾಂಶ ಬರುವ ತನಕ ಈ ಶಿಕ್ಷಕರು ಶಾಲೆಗೆ ಹಾಜರಾಗುತ್ತಿಲ್ಲ. ಈ ಯಾವ ಶಿಕ್ಷಕರೂ ಮ್ಕಕಳ ಸಂಪರ್ಕಕ್ಕೆ ಬಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ವಿದ್ಯಾಗಮ ತರಗತಿಗಳೂ ಸಹ ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಹೆಚ್ಚಿನ ಮಕ್ಕಳು ಹಾಜರಾಗುತ್ತಿದ್ದಾರೆ. ಪೋಷಕರು ಮತ್ತು ಮಕ್ಕಳು ಶಾಲಾರಂಭದ ಕುರಿತು ಸಂತಸ ವ್ಯಕ್ತಪಡಿಸಿದ್ದಾರಲ್ಲದೇ, ಸುರಕ್ಷತೆ ಮತ್ತು ಎಸ್‍ಒಪಿ ಪಾಲನೆ ಕುರಿತು ವಿಶ್ವಾಸ ಹೊಂದಿದ್ದಾರೆ. ಬಹುದಿನಗಳ ಕಾಲ ಶಾಲೆಗಳು ಆರಂಭವಾಗದೇ ಮಕ್ಕಳ ಭವಿಷ್ಯದ ಕುರಿತು ಆತಂಕದಲ್ಲಿದ್ದ ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದೆಲ್ಲೆಡೆ ಶಾಲಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ.

Related posts