ಸರ್ಕಾರವೇ ರೈತರಿಂದ ಹಸುಗಳನ್ನು ಖರೀದಿಸಲಿ: ಡಿ.ಕೆ. ಶಿವಕುಮಾರ್ ಆಗ್ರಹ

ಬೆಂಗಳೂರು: ‘ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನೂತನ ಗೋಹತ್ಯೆ ನಿಷೇಧ ಮಸೂದೆಯು ರೈತರು ಹಾಗೂ ಚರ್ಮೊದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹೀಗಾಗಿ ವಯಸ್ಸಾದ ಜಾನುವಾರುಗಳನ್ನು ಸರ್ಕಾರವೇ ರೈತರಿಂದ ಖರೀದಿಸಿ, ಬಿಜೆಪಿ ಮುಖಂಡರ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ‘ನೂತನ ಗೋಹತ್ಯೆ ನಿಷೇಧ ಮಸೂದೆ ರೈತರು ಹಾಗೂ ಚರ್ಮೊದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಗ್ರಾಮ ಪಂಚಾಯ್ತಿ ಚುನಾವಣೆ ನಂತರ ರಾಜ್ಯದ ಉದ್ದಗಲಕ್ಕೂ ಪ್ರತಿ ತಾಲೂಕು ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಮಯಸ್ಸಾದ ಹಾಗೂ ರೈತರಿಗೆ ಅನುಕೂಲವಾಗದ ಜಾನುವಾರುಗಳನ್ನು ರಾಜ್ಯ ಸರ್ಕಾರವೇ ಒಂದು ದರ ನಿಗದಿ ಮಾಡಿ ಅವರಿಂದ ಖರೀದಿ ಮಾಡಬೇಕು. ಹಸುಗಳ ಮಾಲೀಕತ್ವವನ್ನು ಸರಕಾರದ ಪ್ರತಿನಿಧಿಗಳೇ ಪಡೆದು, ಮಂತ್ರಿಗಳ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ ಎಂದವರು ಸವಾಲು ಹಾಕಿದರು.

ಇನ್ನು ಈ ಮಸೂದೆ ಚರ್ಮೊದ್ಯಮದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿದೆ. ಇಡೀ ಪ್ರಪಂಚದ ಶೇಕಡಾ 11 ರಷ್ಟು ಚರ್ಮೊದ್ಯಮದ ಉತ್ಪಾದನೆ ಭಾರತದಲ್ಲಿದೆ. ಈಗ ಇಡೀ ಉದ್ಯಮ ಮುಚ್ಚಲಿದೆ. ಈ ವಲಯದಲ್ಲಿರುವ ಉದ್ಯೋಗಗಳ ಮೇಲೂ ಋಣಾತ್ಮಕ ಪರಿಣಾಮ ಬೀರಲಿದೆ. ಆ ಉದ್ಯೋಗಿಗಳಿಗೆ ಪರ್ಯಾಯ ಬದುಕಿನ ವ್ಯವಸ್ಥೆ ಕಲ್ಪಿಸಲು ಯಾವ ಯೋಜನೆ ರೂಪಿಸಲಾಗಿದೆ ಎಂದು ಡಿಕೆಶಿ ಪ್ರಶ್ನಿಸಿದರು.

ಇದು ಒಂದು ಸಮುದಾಯದ ಮೇಲೆ ಬಣ್ಣ ಹಚ್ಚಲು, ಅವರನ್ನು ಟಾರ್ಗೆಟ್ ಮಾಡಲು ನಡೆದಿರುವ ಹುನ್ನಾರ. ಆದರೆ ಇದು ಒಂದು ಸಮುದಾಯಕ್ಕೆ ಸಂಬಂಧಿಸಿದ ವಿಚಾರವಲ್ಲ. ಈ ರಾಜ್ಯದ ರೈತರು, ಎಲ್ಲ ಸಮಾಜದ ವಿಚಾರ. ಅವರ ರಕ್ಷಣೆಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಪಕ್ಷ ಚಿಂತನೆ ನಡೆಸಿದೆ ಎಂದು ಅವರು ಹೇಳಿದರಲ್ಲದೆ, ನಾವು ಅಧಿಕಾರಕ್ಕೆ ಬಂದರೆ, ಈ ಸರ್ಕಾರ ಜಾರಿಗೆ ತಂದಿರುವ ಎಲ್ಲ ಜನ ವಿರೋಧಿ ಕಾಯ್ದೆಗಳನ್ನು ಮುಲಾಜಿಲ್ಲದೆ ವಜಾಗೊಳಿಸುತ್ತೇವೆ ಎಂದರು.

Related posts