ಮೋದಿ ಸರ್ಕಾರದ ಭರವಸೆ ತಿರಸ್ಕರಿಸಿದ ಅನ್ನದಾತರು, ಡಿ.3ರಂದು ಮತ್ತೊಮ್ಮೆ ಸಂಧಾನ

ದೆಹಲಿ: ನೂತನ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ತೀವ್ರಗೊಂಡಿದೆ. ರೈತರ ಸಮಸ್ಯೆಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲು ಸರ್ಕಾರ ನೀಡಿದ ಭರವಸೆಗಳನ್ನು ಪ್ರತಿಭಟನಾ ನಿರತ ಸಂಘಟನೆಗಳ ಪ್ರತಿನಿಧಿಗಳು ತಿರಸ್ಕರಿಸಿದ್ದಾರೆ. ಮಂಗಳವಾರ ಕೇಂದ್ರ ಸರ್ಕಾರ ನಡೆಸಿದ ಸಂಧಾನ ಸಭೆಯಲ್ಲಿ ಈ ಭರವಸೆ ನೀಡಲಾಯಿತಾದರೂ ಅದಕ್ಕೆ ರೈತ ಪ್ರತಿನಿಧಿಗಳು ನಿರಾಕರಿಸಿದರು. ಹಾಗಾಗಿ ಯಾವುದೇ ಪರಿಹಾರ ಕಾಣದೆ ಮೂರು ಕೇಂದ್ರ ಸಚಿವರ ಸಮ್ಮುಖದಲ್ಲಿ ನಡೆದ ಸಭೆ ಫಲ ಕಾಣಲಿಲ್ಲ.

ಸಭೆಯಲ್ಲಿ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಜಾರಿಯಾಗಿರುವ ಮೂರು ನೂತನ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ರೈತ ಪ್ರತಿನಿಧಿಗಳು ಪಟ್ಟು ಹಿಡಿದರು. ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಗುರುವಾರ ಮತ್ತೊಂದು ಸುತ್ತಿನ ಚರ್ಚೆಗೆ ಸರ್ಕಾರ ಆಹ್ವಾನ ನೀಡಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 13 ರಂದು ನಡೆದ ಹಿಂದಿನ ಸಭೆಯಲ್ಲೂ ಯಾವುದೇ ಪ್ರಗತಿ ಇಲ್ಲದೆ ವಿಫಲವಾಗಿತ್ತು. ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಡಿ.3ಕ್ಕೆ ನಿಗದಿಯಾಗಿದ್ದ ಸಭೆಯನ್ನು ಎರಡು ದಿನ ಮುಂಚಿತವಾಗಿ ಮನ್ಗಳವಾರ ನಡೆಸಲಾಯಿತು. ಆದರೆ, ಸಭೆ ಫಲ ನೀಡದ ಹಿನ್ನೆಲೆಯಲ್ಲಿ ಡಿಸೆಂಬರ್ 3 ರಂದು ಮತ್ತೆ ಸಭೆ ನಿಗದಿಯಾಗಿದೆ.

Related posts