ಎತ್ತಿನಹೊಳೆ ಕಾಮಗಾರಿಗೆ ವೇಗ; ಶೀಘ್ರವೇ ವಾಣೀವಿಲಾಸಕ್ಕೆ ನೀರು?

ಹಾಸನ: ಮುಂದಿನ ಮಳೆಗಾಲದಲ್ಲಿ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ ವೇದಾವತಿ ಕಣಿವೆ ಮೂಲಕ ತಾತ್ಕಾಲಿಕವಾಗಿ ನೀರು ಹರಿಸಲಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸಣ್ಣ ನೀರಾವರಿ ಸಚಿವ ಸಿ.ಪಿ. ಯೋಗೇಶ್ವರ್, ಸ್ಥಳೀಯ ಶಾಸಕರು ಜೊತೆ ಬೇಲೂರು ತಾಲೂಕಿನ ಎತ್ತಿನಹೊಳೆ ಯೋಜನಾ ಕಾಮಗಾರಿಯನ್ನು ಶುಕ್ರವಾರ ಪರಿವೀಕ್ಷಿಸಿದ ಸಚಿವರು, ಎತ್ತಿನಹೊಳೆ ಯೋಜನೆಯ ಹಂತ-1ರ ಕಾಮಗಾರಿಗಳು ಮತ್ತು ಹಂತ-2ರ 33 ಕಿ.ಮೀ.ವರೆಗಿನ ಗುರುತ್ವಾ ಕಾಲುವೆ ಕಾಮಗಾರಿಗಳನ್ನು ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ. ಪ್ರಾಯೋಗಿಕ ನೀರನ್ನು ವೇದಾವತಿ ಕಣಿವೆಯ ಮೂಲಕ ಹರಿಸಲು ಯೋಜನೆಯನ್ನು ರೂಪಿಸಲಾಗಿದೆ. ತುಮಕೂರಿನ ಭೈರಗೊಂಡ್ಲು ಜಲಾಶಯದ ಕಾಮಗಾರಿ ನಡೆಯದೇ ಇರುವುದರಿಂದ ಪ್ರಾಯೋಗಿಕವಾಗಿ ಈ ರೀತಿ ನೀರನ್ನು ಹರಿಸಿ, ಜನರಿಗೆ ವಿಶ್ವಾಸ ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆಗಾಗಿ ಜಮೀನು ಕಳೆದುಕೊಳ್ಳುವ ರೈತರಿಗೆ ಹೊಸ ಭೂಸ್ವಾಧೀನ ಕಾಯ್ದೆ 2013ರ ಪ್ರಕಾರ ಪ್ರಕ್ರಿಯೆಯನ್ನು ಕೈಗೊಂಡಿದೆ. ರೈತರಿಗೆ ಹಣವನ್ನು ಪಾವತಿಸಲು ಕ್ರಮ ವಹಿಸಲಾಗುತ್ತದೆ ಹಾಗೂ ಹಂತ ಹಂತವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕಾಮಗಾರಿಗಳನ್ನು ನಿರ್ವಹಿಸಲಾಗುತ್ತದೆ. ಯೋಜನೆಗೆ ಆರಂಭಿಕ ಮೊತ್ತ 12,912.36 ಕೋಟಿ ರೂ. ನಿಗದಿಗೊಳಿಸಿದ್ದು, ಎರಡೂ ಹಂತಗಳಲ್ಲಿ ಒಟ್ಟು 7013.3 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಿದರು.

Related posts