ಪ್ರವಾಹ ಪರಿಹಾರ; ಅನ್ಯಾಯಕ್ಕೆ ಮತದಾರನೇ ಉತ್ತರ ಕೊಡಬೇಕು: ಡಿ.ಕೆಶಿ

ಬೆಳಗಾವಿ: ಬೆಳಗಾವಿ ಹಾಗೂ ಉತ್ತರ ಕರ್ನಾಟಕದಲ್ಲಿ ಅನೇಕ ಮಂತ್ರಿಗಳು, ಶಾಸಕರು, ಸಂಸದರು ಇದ್ದರೂ ಪ್ರವಾಹದಿಂದ ನೊಂದಿರುವ ಜನರಿಗೆ ನೆರವಾಗಲು ಸಾಧ್ಯವಾಗಲಿಲ್ಲ ಎಂದರೆ, ಇದಕ್ಕೆ ಮತದಾರನೇ ಉತ್ತರ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಪ್ರವಾಹದಿಂದ ಈ ಭಾಗದ ಜನರ ಜೀವನ ಬೀದಿಗೆ ಬಿದ್ದಿದೆ. ತಮ್ಮದೇ ಸರ್ಕಾರ, ಇಷ್ಟು ಜನ ಸಂಸದರು, ಮಂತ್ರಿಗಳು, ಶಾಸಕರು ಇದ್ದರೂ ಇಲ್ಲಿನ ಜನರಿಗೆ ಪರಿಹಾರ ಹಾಗೂ ನ್ಯಾಯ ಕೊಡಿಸಲು ಅವರು ವಿಫಲರಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಅಭ್ಯರ್ಥಿ ಕುರಿತು ಸಭೆ ನಡೆಸಿ ತೀರ್ಮಾನ:

ಮುಂಬರುವ ಉಪಚುನಾವಣೆಗಳಿಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚಿಸಲು ನಮ್ಮ ಎಲ್ಲ ನಾಯಕರು, ಶಾಸಕರು, ಜಿಲ್ಲಾ ಅಧ್ಯಕ್ಷರು, ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರ ಸಭೆ ಕರೆದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ನಂತರ ತೀರ್ಮಾನ ಮಾಡಲಾಗುವುದು ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Related posts