ಫುಡ್ ಪಾರ್ಕ್ ಗಳ ನಿರ್ಮಾಣದ ಉದ್ದೇಶ ಈಡೇರಲೇಬೇಕು : ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ 4 ಫುಡ್ ಪಾರ್ಕ್’ಗಳಿದ್ದು, ಅವುಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಬೇಕು. ಅಭಿವೃದ್ಧಿಯೇ ನಮ್ಮ ಮೊದಲ ಗುರಿ. ಫುಡ್ ಪಾರ್ಕ್’ಗಳ ಅಭಿವೃದ್ಧಿ ಹಾಗೂ ಉದ್ದೇಶಗಳ ಈಡೇರಿಕೆಗೆ ಸರ್ಕಾರ ಫುಡ್ ಪಾರ್ಕ್’ಗಳ ಹಿಂದೆ ಶಕ್ತಿಯಾಗಿ ಬೆಂಬಲಿಸಲಿದೆ ಎಂದು ಫುಡ್ ಕರ್ನಾಟಕ ಲಿಮಿಟೆಡ್ ಅಧ್ಯಕ್ಷರೂ ಆಗಿರುವ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ರಾಜ್ಯದಲ್ಲಿ ಫುಡ್ ಕರ್ನಾಟಕ ಲಿಮಿಟೆಡ್ ಸಂಸ್ಥೆಯ ಬಲವರ್ಧನೆಗೆ ರೂಪಿತಗೊಂಡಿರುವ ‘ಫುಡ್ ಕರ್ನಾಟಕ ಲಿಮಿಟೆಡ್’ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ರಾಜ್ಯದ ನಾಲ್ಕು ಫುಡ್ ಪಾರ್ಕ್ ಗಳ ಪ್ರಗತಿ ಪರಿಶೀಲನಾ ಸಭೆಯನ್ನು ಬಿ.ಸಿ.ಪಾಟೀಲ್ ನಡೆಸಿದರು.

ಬಳಿಕ ಮಾತನಾಡಿದ ಅವರು, ಕೇಂದ್ರದ ಆತ್ಮನಿರ್ಭರ್ ಯೋಜನೆಯಲ್ಲಿ ‘ಫುಡ್ ಪಾರ್ಕ್’ಗೆ 4 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಅನುದಾನದ ಉದ್ದೇಶ ಸಫಲವಾಗಬೇಕು ಎಂದರು.

ಲಾಕ್ಡೌನ್ ಸಂದರ್ಭದಲ್ಲಿ ರೈತರ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಆಹಾರ ಉತ್ಪಾದನಾ ಘಟಕ’ಗಳು ಸಹಾಯಕವಾಗಲಿದೆ ಎಂಬುದನ್ನು ಗಮನಿಸಿ ರಾಜ್ಯದಲ್ಲಿನ ‘ಫುಡ್ ಪಾರ್ಕ್’ಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು ಎಂದರು.ಈ ನಾಲ್ಕು ಫುಡ್ ಪಾರ್ಕ್ ಗಳ ಅಭಿವೃದ್ಧಿಯನ್ನು ಕಂಡು ರಾಜ್ಯದಲ್ಲಿ ಇನ್ನಷ್ಟು ಫುಡ್ ಪಾರ್ಕ್ ಗಳ ಸ್ಥಾಪನೆಗೆ ಜನರು ಮುಂದಾಗಬೇಕು. ಸರ್ಕಾರ ಸದಾ ಫುಡ್ ಪಾರ್ಕ್ ಗಳ ಹಿಂದೆ ಬೆನ್ನೆಲುಬಾಗಿ ನಿಲ್ಲಲಿದೆ. ಫುಡ್ ಪಾರ್ಕ್ ಗಳನ್ನು ಆರಂಭಿಸಿದ ಉದ್ದೇಶ ಈಡೇರಲೇಬೇಕು ಎಂದರು. ಹಣ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಫುಡ್ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸದೇ ಇರುವುದು ಸರಿಯಲ್ಲ. ಕಾರಣಗಳು ಸರಿಯಾಗಿರಬೇಕು. ಸಮರ್ಪಕವಾಗಿ ಕಾರ್ಯನಿರ್ವಹಿಸದ ಗುರಿಸಾಧಿಸದ ಫುಡ್ ಪಾರ್ಕ್ ಗಳ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Related posts