ವಿಲೀನ- ಕಪೋಲಕಲ್ಪಿತ ಸುಳ್ಳು ವದಂತಿ: ಕ್ಯಾಪ್ಟನ್ ಕಾರ್ಣಿಕ್

ಬೆಂಗಳೂರು: ಬಿಜೆಪಿ- ಜೆಡಿಎಸ್ ವಿಲೀನ ಪ್ರಕ್ರಿಯೆಯ ಕುರಿತ ಸುದ್ದಿಗಳು ಸಂಪೂರ್ಣ ಕಪೋಲಕಲ್ಪಿತ. ಭಾರತೀಯ ಜನತಾ ಪಾರ್ಟಿ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಈ ಕುರಿತು ನಡೆದಿರುವ ಚರ್ಚೆಗಳು ಅನಗತ್ಯ ಗೊಂದಲ ಸೃಷ್ಟಿ ಮಾಡುವ ದುರುದ್ದೇಶದಿಂದ ಕೂಡಿವೆ. ಯಾರು ಕೂಡಾ ಈ ವದಂತಿಗಳಿಗೆ ಕಿವಿಗೊಡಬಾರದೆಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್  ಹೇಳಿದ್ದಾರೆ.

ನಮ್ಮ ನೆಚ್ಚಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರಕಾರವು ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿ ಹಾಗೂ ಕೋವಿಡ್ ಸಂಕಷ್ಟದ ಸಮಸ್ಯೆಗಳ ನಡುವೆಯೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಈಗ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯಪ್ರವೃತ್ತವಾಗಿದೆ. “ಬೆಂಗಳೂರು ಮಿಶನ್ 2022” ಬೆಂಗಳೂರಿಗೆ ನವ ಚೈತನ್ಯದಿಂದ ಕೂಡಿರುವ ನಿಟ್ಟಿನಲ್ಲಿ ಸರಕಾರದ ಅಭಿವೃದ್ಧಿ ಚಿಂತನೆಯನ್ನು ಸಾದರಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮ ಸ್ವರಾಜ್ಯ ಸಮಾವೇಶಗಳ ಮೂಲಕ ಪಕ್ಷ ಸಂಘಟನೆ ಬಲಗೊಂಡಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇಕಡಾ 80ಕ್ಕೂ ಹೆಚ್ಚು ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಾಗಿ ಪಕ್ಷವು ಕಾರ್ಯಪ್ರವೃತ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ರಾಜ್ಯದ ಪ್ರಭಾರಿಗಳಾದ ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಸನ್ಮಾನ್ಯ ಶ್ರೀ ಅರುಣ್ ಸಿಂಗ್ ಅವರ ಮಾರ್ಗದರ್ಶನದಲ್ಲಿ, ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ಶ್ರೀ ನಳಿನ್‌ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಅವರು ಅಭಿವೃದ್ಧಿಪರ ಕಾರ್ಯಕ್ರಮಗಳೊಂದಿಗೆ ಕರ್ನಾಟಕವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಪರಿವರ್ತಿಸುತ್ತಿರುವ ಈ ಕಾಲಘಟ್ಟದಲ್ಲಿ ಈ ಅಸಂಬದ್ಧ ಚರ್ಚೆ ತೀರಾ ಅಪ್ರಸ್ತುತ ಎಂದೂ ಅವರು ತಿಳಿಸಿದ್ದಾರೆ.

Related posts