ತ್ಯಾಜ್ಯದಿಂದ ವಿದ್ಯುತ್; 2 ವರ್ಷಗಳಲ್ಲಿ ಕಾರ್ಯರೂಪ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಎರಡು ವರ್ಷದಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ತ್ಯಾಜ್ಯ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳನ್ನು ಆರಂಭಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಕಟಿಸಿದ್ದಾರೆ.

ಪ್ರತಿ ದಿನ ಸುಮಾರು ನಾಲ್ಕುವರೆ ಮೆಟ್ರಿಕ್ ಟನ್ ನಷ್ಟು ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಮಧುಗಿರಿ ಮತ್ತು ಕನಕಪುರದಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ತ್ಯಾಜ್ಯಪುನರ್ ಬಳಕೆ ಪಾರ್ಕ್ ಸ್ಥಾಪನೆ ಮಾಡುವ ಸಂಬಂಧ ಪ್ರಸ್ತಾವನೆ ಇತ್ತು. ಆದರೆ ಸ್ಥಳೀಯರಿಂದ ಪ್ರತಿರೋಧ ಹಿನ್ನೆಲೆಯಲ್ಲಿ ಆ ಪ್ರಸ್ತಾವನೆಯನ್ನು ತಡೆಹಿಡಿಯಲಾಗಿದೆ ಎಂದ ಅವರು, ಘನ್ಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಐದು ಕಂಪನಿಗಳಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ ಎರಡು ಸಂಸ್ಥೆಗಳಿಂದ ಘಟಕಗಳ ಸಿದ್ದತಾ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.

ಕೆಪಿಸಿಎಲ್ವ ತಿಯಿಂದ ಬಿಡದಿಯಲ್ಲಿ ಪ್ರತಿದಿನ 11.5೦ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಯೋಜನೆಗೆ ಕಾರ್ಯದೇಶನೀಡಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಿಪಿಪಿ ಮಾದರಿಯಲ್ಲಿ ಮಾವಳ್ಳಿಪುರ ಘಟಕದಲ್ಲಿ ಫರ್ಮ್ ಗ್ರೀನ್ ಸಂಸ್ಥೆಯಿಂದ ಪ್ರತಿದಿನ ಒಂದು ಸಾವಿರ ಮೆಟ್ರಿಕ್ ಟನ್ ಘನತ್ಯಾಜ್ಯ ಉಪಯೋಗಿಸಿ ಸಂಕುಚಿತ ನೈಸರ್ಗಿಕ ಅನಿಲ ಉತ್ಪಾದನೆ ಮಾಡಲು ಸರ್ಕಾರವು ಅನುಮೋದನೆ ನೀಡಿದೆ. ಅಂತೆಯೇ ಇನ್ನಿತರೆ ಎರಡು ಯೋಜನೆಗಳಾದ ಮಾರೇನಹಳ್ಳಿ ಸ್ಥಳದಲ್ಲಿ 6೦೦ ಮೆಟ್ರಿಕ್ ಟನ್ ಪ್ರತಿದಿನ ಘನತ್ಯಾಜ್ಯ ದಿಂದ ವಿದ್ಯುತ್ ಉತ್ಪಾದನೆ ಮಾಡಲು ನೆಕ್ಸಸ್ ನೋವಸ್ ಸಂಸ್ಥೆಯವರಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ಕೈಗೊಳ್ಳ ಲಾಗುತ್ತಿದೆ. ಎನ್ಇಜಿ ಸಂಸ್ಥೆಯವರಿಂದ ಮಾವಳ್ಳಿಪುರ ಘಟಕದಲ್ಲಿ 5೦೦ ಮೆಟ್ರಿಕ್ ಟನ್ ಪ್ರತಿದಿನ ಘನತ್ಯಾಜ್ಯವನ್ನು ಉಪಯೋಗಿಸಿ 8 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.

Related posts