ಗೋಹತ್ಯೆ ನಿಷೇಧ; ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬಿದ್ದಿದೆ.

‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020’ನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು. ಆದರೆ ವಿಧಾನ ಪರಿಷತ್​ನಲ್ಲಿ ಅಂಗೀಕರಿಸಲು ಸಾಧ್ಯವಾಗಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮಾಡಿ ಈ ವಿದೇಯಕ ಜಾರಿಗೆ ಪ್ರಯತ್ನ ಮಾಡಿದೆ. ಇದೀಗ ರಾಜ್ಯ ಸರ್ಕಾರದ ವಿದೇಯಕಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಮಂಗಳವಾರ ಸಹಿ ಹಾಕಿದ್ದು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಬಿಜೆಪಿ ನಾಯಕರು, ರಾಜ್ಯದಲ್ಲಿ ಜಾನುವಾರು ಸಾಗಾಣಿಕೆ, ಹತ್ಯೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ, ಹತ್ಯೆಗಾಗಿ ಜಾನುವಾರು ಮಾರಾಟ, ಖರೀದಿ ಮೇಲೆ ಸಹ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ, ಹತ್ಯೆಗಾಗಿ ಮಾರಾಟ ಮಾಡಿದರೆ ಆ ಜಾನುವಾರುಗಳನ್ನು ಜಪ್ತಿ ಮಾಡಲಾಗುವುದು. ನಿಯಮ ಉಲ್ಲಂಘಿಸಿದರೆ ಮೂರು ವರ್ಷದಿಂದ ಏಳು ವರ್ಷ ಜೈಲು ಶಿಕ್ಷೆ ಸಹ ವಿಧಿಸಲಾಗುವುದು. ಅಲ್ಲದೆ 50 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ದಂಡ ಸಹ ವಿಧಿಸಲಾಗುವುದು ಎಂದಿದ್ದಾರೆ.

Related posts