ಕರಾವಳಿಯ ಮನೆಮಗನಾದ ಐಪಿಎಸ್ ಅಧಿಕಾರಿ; ಟ್ವೀಟ್ ಬಗ್ಗೆ ತುಳುವರು ‘ಹರ್ಷ’

ಮಂಗಳೂರು: ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷಾ ವರ್ಗವಾಗಿದ್ದಾರೆ. ಮಂಗಳೂರು ಕಮಿಷನರೇಟ್ ಮುಖ್ಯಸ್ಥರಾಗಿ ಅವರು ಬಂದರು ನಗರಿಯಲ್ಲಿ ಕಳೆದಿದ್ದು ಕೇವಲ 11 ತಿಂಗಳು. ಆದರೆ ಅಷ್ಟರಲ್ಲೇ ಅವರು ಕರಾವಳಿ ಜನರ ಪಾಲಿಗೆ ಮನೆ ಮಗನಾಗಿ ಗುರುತಾದರು. ಭಾವನಾತ್ಮಕ ಸಂಬಂಧದ ಬೆಸುಗೆಯನ್ನು ಗಟ್ಟಿಯಾಗಿಸಿ ಅವರು ಬೆಂಗಳೂರಿಗೆ ಮರಳುವಾಗ ವೇದನೆ ಅನುಭವಿಸಿದವರು ಅನೇಕರು.

ಮೀನಾ ನಂತರ ಹರ್ಷ

ಸುಮಾರು 2 ದಶಕಗಳ ಹಿಂದೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿದ್ದ ಭರತ್ ಲಾಲ್ ಮೀನಾ ಜನಪರ ಕಾರ್ಯಕ್ರಮಗಳಿಂದಾಗಿ ಗಮನಸೆಳೆದಿದ್ದರು. ಅಪ್ನಾ ದೇಶ್ ಕಾರ್ಯಕ್ರಮ ಮೂಲಕ ಜನಾನುರಾಗಿಯಾಗಿದ್ದ ಜಿಲ್ಲಾಧಿಕಾರಿ ಭರತ್ ಲಾಲ್ ಮೀನಾ ಅವರನ್ನು 1999ರಲ್ಲಿ ದಕ್ಷಿಣಕನ್ನಡದಿಂದ ರಾಜ್ಯ ಸರ್ಕಾರ ವರ್ಗಾಯಿಸಿದಾಗ ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆದು ಇಡೀ ಕರಾವಳಿ ಬಂದ್ ಆಗಿತ್ತು.
ಇದೀಗ ಈವರೆಗೂ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಆಗಿದ್ದ ಮಂಗಳೂರು ಪೊಲೀಸ್ ಆಯುಕ್ತ ಹಿರಿಯ ಐಪಿಎಸ್ ಅಧಿಕಾರಿ ಡಾ.ಹರ್ಷಾ ವರ್ಗಾವಣೆ ಸಂದರ್ಭದಲ್ಲೂ ಜನ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಕೆಲ ತಿಂಗಳ ಹಿಂದೆ ಇಡೀ ದೇಶಕ್ಕೆ ಸವಾಲಾಗಿದ್ದ ಪೌರತ್ವ ವಿರೋಧಿ ಹೋರಾಟ, ಬಂದರು ನಗರಿಯನ್ನೂ ಧಗಧಗಿಸುವಂತೆ ಮಾಡಿತ್ತು. ಆದರೆ ಎಡಿಜಿಪಿ ದಯಾನಂದ್ ಅವರ ಸಾಥ್ ಪಡೆದ ಡಾ.ಹರ್ಷಾ ಆ ಜ್ವಾಲಾಗ್ನಿಯಿಂದ ಮಂಗಳೂರು ಜನರನ್ನು ಪಾರು ಮಾಡಿದ್ದರು. ಅಷ್ಟೇ ಅಲ್ಲ, ಆ ಹಿಸಾಚಾರದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯುವಲ್ಲೂ ಸಫಲರಾಗಿ ಮಂಗಳೂರು ಜನರ ಮೆಚ್ಚುಗೆಗೆ ಪಾತ್ರರಾದರು.

ಹರ್ಷಾ ಗುಣಗಾನ

ಈ ನಡುವೆ ಜನರಿಗೆ ತೀರಾ ಹತ್ತಿರದ ಅಧಿಕಾರಿ ಎಂದೇ ಹರ್ಷಾ ಜನಜನಿತರಾಗಿದ್ದರು. ಕಮೀಷನರ್ ಎನ್ನುವುದಕ್ಕಿಂತ ಸಬ್-ಇನ್ಸ್ಪೆಕ್ಟರ್ ರೀತಿ ಜನರ ಅಹವಾಲುಗಳನ್ನು ಕೇಳುತ್ತಿದ್ದರು. ತಾವೇ ಸ್ಥಳಕ್ಕೆ ಧಾವಿಸಿ ರಾತ್ರಿ ಹಗಲು ಮೊಕ್ಕಾಮ್ ಹೂಡುತ್ತಿದ್ದರು. ಈ ಕಾರ್ಯವೈಖರಿಯೇ ಮಂಗಳೂರು ಜನರ ಪಾಲಿಗೆ ಹರ್ಷಾ ತೀರಾ ಹತ್ತಿರವಾಗಿರೋದು.

ಇದೀಗ ಡಾ.ಹರ್ಷಾ ಅವರು ಬೆಂಗಳೂರಿಗೆ ವರ್ಗಾವಣೆಯಾಗುತ್ತಿದ್ದಂತೆಯೇ ಅವರ ಸೇವೆಯನ್ನು, ಕಾರ್ಯವೈಖರಿಯನ್ನು ಮಂಗಳೂರು ಜನ ಸಾಮಾಜಿಕ ಜಾಲತಾಣಗಳಲ್ಲಿ ಗುಣಗಾನ ಮಾಡುತ್ತಿದ್ದಾರೆ. ಈ ಬಗ್ಗೆಯೇ ಬಹಳಷ್ಟು ಚರ್ಚೆಗಳೂ ಸಾಗಿವೆ.

ಇದಕ್ಕೆ ಸೌಮ್ಯವಾಗಿಯೇ ಡಾ.ಹರ್ಷಾ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ತುಳುನಾಡಿನ ಜನರೊಂದಿಗಿನ ಪ್ರೀತಿಯನ್ನು ತಮ್ಮದೇ ಶೈಲಿಯಲ್ಲಿ ಹೇಳಿಕೊಂಡು ಅವರು ಮಾಡಿರುವ ಟ್ವೀಟ್ ಇಡೀ ನಾಡಿನ ಗಮನಸೆಳೆದಿದೆ. ‘ಕುಡ್ಲದ ಮಾತ ಮೋಕೆದ ಬಂಧುಲೇ, 11 ತಿಂಗೊಳುರ್ದ್ ಕುಡ್ಲದ ಪೊಲೀಸ್ ಆಯುಕ್ತೆಯಾದ್ ಸೇವೆ ಮಂದಿನ ಎಂಕ್ ಇತ್ತೆ ವರ್ಗಾವಣೆ ಅವೋಂದುಂಡು.ಇಲಾಖೆದ ಸಂಪೂರ್ಣ ಸಹಕಾರದೊಟ್ಟಿಗೆ ಮಸ್ತ್ ಪ್ರಾಮಾಣಿಕ ಬೊಕ್ಕ ಜನಪರವಾದು ಎನ್ನ ಕರ್ತವ್ಯ ಮಲ್ತೊಂದು ಬೈದೆ. ಎಂಕ್ ಸಹಕಾರ ಬೆಂಬಲ ಕೊರ್ನ ಮಾತೆರೆಗ್ಲಾ ಉಡಲ್ ದಿಂಜಿನ‌ ಸೊಲ್ಮೆಲು’ ಎಂದವರು ತುಳು ಭಾಷೆಯಲ್ಲೇ ಕೃತಜ್ಞತೆ ಸಲ್ಲಿಸಿ ತುಳುನಾಡಿನ ಜನರನ್ನು ಮತ್ತಷ್ಟು ಬಾವುಕರನ್ನಾಗಿಸಿದ್ದಾರೆ.

ಇದನ್ನೂ ಓದಿ.. ಡಾನ್ ಮುತ್ತಪ್ಪ ರೈ ತಲೆ ತಗ್ಗಿಸಿದ್ದು ಈ ಖಡಕ್ ಅಧಿಕಾರಿಯ ಮಾತಿಗೆ ಮಾತ್ರ

Related posts