ಕಾಶ್ಮೀರ ಕುರಿತ ಭಿತ್ತಿಪತ್ರ ವಿವಾದ ; ಯುವತಿಯ ಬಂಧನ

ಬೆಂಗಳೂರು: ಬೆಂಗಳೂರಿನ ಪುರಭವನದ ಮುಂಭಾಗ ಪ್ರತಿಭಟನೆ ವೇಳೆ ಕಾಶ್ಮೀರ ಮುಕ್ತ ಎಂಬ ಬರಹವುಳ್ಳ ಭಿತ್ತಿ ಪತ್ರ ಪ್ರದರ್ಶಿಸಿದ ಯುವತಿ ಆರ್ದ್ರಾಳನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರದ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಮೊಳಗಿದ ಘಟನೆ ಖಂಡಿಸಿ ಬೆಂಗಳೂರಿನ ಪುರಭವನದ ಮುಂಭಾಗ ಶುಕ್ರವಾರ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಪ್ರತಿಭಟನೆ ವೇಳೆ ಆರ್ದ್ರಾ ಎಂಬ ಯುವತಿ ಫ್ರೀ ಕಾಶ್ಮೀರ ಘೋಷಣೆಯುಳ್ಳ ಭಿತ್ತಿಪತ್ರ ಪ್ರದರ್ಶಿಸಿದ್ದರು.

ಯುವತಿಯ ಈ ನಡೆಗೆ ಅಲ್ಲಿ ನೆರೆದಿದ್ದ ಪ್ರತಿಭಟನಾಕಾರರೇ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಯುವತಿಯನ್ನು ಉದ್ರಿಕ್ತಗುಂಪು ಪ್ರಶ್ನಿಸುತ್ತಿದ್ದಂತೆಯೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆಯಲು ಮುಂದಾದರು. ಆ ವೇಳೆ ನೂಕಾಟ ತಳ್ಳಾಟ ನಡೆಯಿತು. ಕೂಡಲೇ ಆರ್ದ್ರಾರನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡರು

ಬಳಿಕ 6ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀರ ಮುಂದೆ ಆರ್ದ್ರಾರನ್ನು ಪೊಲೀಸರು ಹಾಜರುಪಡಿಸಿದ್ದಾರೆ. ಕೋರಮಂಗಲದ ಎನ್ ಜಿವಿಯಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಆರೋಪಿಯನ್ನು ಹಾಜರು ಪಡಿಸಲಾಗಿದ್ದು, ಆರೋಪಿಯನ್ನು ಮಾರ್ಚ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Related posts