ನಿರ್ಭಯಾಳಿಗೆ ನ್ಯಾಯ ಸಿಕ್ಕಿದೆ; ನಿರ್ಭಯಾ ತಾಯಿ ಆಶಾ ದೇವಿ ಪ್ರತಿಕ್ರಿಯೆ

ದೆಹಲಿ: ನಿರ್ಭಯಾ ಹಂತಕರನ್ನು ಇಂದು ಮುಂಜಾನೆ ಗಲ್ಲಿಗೇರಿಸಲಾಗಿದೆ. ದೆಹಲಿಯ ತಿಹಾರ್ ಜೈಲಿನಲ್ಲಿ ನಾಲ್ವರು ಅಪರಾಧಿಗಳನ್ನು ಏಕಕಾಲದಲ್ಲಿ ನೇಣುಗಂಬಕ್ಕೇರಿಸುವ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೊಂದು ಹೊಸ ದಾಖಲೆ ನಿರ್ಮಾಣವಾಯಿತು.

ಅಬಲೆ ನಿರ್ಭಯ ಮೇಲಿನ ಅತ್ಯಾಚಾರ ಹಾಗೂ ಕಗ್ಗೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿತ್ತು. ಅತ್ಯಾಚಾರಿಗಳಿಗೆ ಕ್ರೂರ ಶಿಕ್ಷೆಯಾಗಬೇಕೆಂದು ದೇಶವ್ಯಾಪಿ ಹೋರಾಟವೂ ನಡೆದಿತ್ತು. ಇದೀಗ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಮರಣದಂಡನೆಯ ಶಿಕ್ಷೆಯಾಗಿದ್ದು ದೇಶದ ಜನತೆ ಈ ಶಿಕ್ಷೆ ಜಾರಿಯ ಕ್ರಮವನ್ನು ಸ್ವಾಗತಿಸಿದ್ದಾರೆ.

ಕೊನೆಗೂ ನ್ಯಾಯ ದೊರಕಿದೆ ಎಂದು ನಿರ್ಭಯಾ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ನ್ಯಾಯದಾನ ವಿಳಂಬವಾಗಿದೆ. ಆದರೂ ನಿರ್ಭಯಾಳಿಗೆ ನ್ಯಾಯ ಸಿಕ್ಕಿದೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಹೇಳಿದ್ದಾರೆ. ಹಂತಕರಿಗೆ ಗಲ್ಲು ಶಿಕ್ಷೆ ಜಾರಿಯಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇಂದು ದೇಶಕ್ಕೆ ನ್ಯಾಯ ಸಿಕ್ಕಿದೆ. ಈ ದಿನವನ್ನು ದೇಶದ ಹೆಣ್ಣುಮಕ್ಕಳಿಗೆ ಆರ್ಪಿಸುವುದಾಗಿ ಹೇಳಿದರು. ನಿರ್ಭಯಾಳಿಗಾಗಿ ಆರಂಭಿಸಿದ ಹೋರಾಟವನ್ನು ದೇಶದ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಮುಂದುವರೆಸಲಾಗುವುದು ಎಂದು ಆಶಾದೇವಿ ಇದೆ ವೇಳೆ ಘೋಷಿಸಿದರು.

Related posts