ಸಾರಿಗೆ ನೌಕರರ ಮುಷ್ಕರ ವಿಚಾರ: ಡಿಕೆಶಿ, ಕೋಡಿಹಳ್ಳಿ ವಿರುದ್ಧ ಸುಧಾಕರ್ ಟೀಕಾಸ್ತ್ರ

ಬೆಂಗಳೂರು: ಸಾರಿಗೆ ನೌಕರರು ಮುಂದಿಟ್ಟಿರುವ ಬಹುತೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ತಮ್ಮನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ಪ್ರಚೋದನೆಗೊಳಗಾಗಬಾರದು ಎಂದು ಸಾರಿಗೆ ನಿಗಮಗಳ ನೌಕರರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ಮಾಡಿದ್ದಾರೆ.

ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ. ಸಾರಿಗೆ ವ್ಯವಸ್ಥೆ ಅತ್ಯಂತ ಪ್ರಮುಖ ಮತ್ತು ಅಗತ್ಯ ಸೇವೆಯಾಗಿದ್ದು, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಪದೇ ಪದೇ ಮುಷ್ಕರ, ಬಂದ್ ಗಳಿಗೆ ಕುಮ್ಮಕ್ಕು ನೀಡುವ ಮೂಲಕ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆ ಉಂಟುಮಾಡುತ್ತಿದ್ದಾರೆ. ಇದರಿಂದಾಗಿ ಬಡವರು, ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರಿಗೆ ಕಿರುಕುಳ ಉಂಟಾಗಿದೆ. ಆದರೆ ಈಗ ಪ್ರಚೋದನೆಗೆ ಒಳಗಾಗದೆ ಮರಳಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರಿಗೆ ಧನ್ಯವಾದ ಎಂದು ಸಚಿವರು ಹೇಳಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಸಚಿವ ಸುಧಾಕರ್, ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದವೂ ಟೀಕೆ ಮಾಡಿದ್ದಾರೆ.

ರೈತ ನಾಯಕರು ಎನಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಾರಿಗೆ ವ್ಯವಸ್ಥೆ ಹಾಗೂ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ತಮಗೆ ಅರಿವಿಲ್ಲದ ವಿಷಯಗಳ ಬಗ್ಗೆ ಮೂಗು ತೂರಿಸುವುದು ಎಷ್ಟು ಸಮಂಜಸ ಎಂದು ಜನರು ಕೇಳುತ್ತಿರುವ ಪ್ರಶ್ನೆಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಮೊದಲು ಉತ್ತರ ನೀಡಬೇಕು ಎಂದು ಸಚಿವರು ಹೇಳಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ನಾಯಕರು ಕಾಂಗ್ರೆಸ್ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರಗಳು ಇದ್ದ ಸಂದರ್ಭದಲ್ಲಿ ಈ ಬೇಡಿಕೆಗಳನ್ನು ಏಕೆ ಪೂರೈಸಲಿಲ್ಲ ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.

Related posts