ಮತ್ತೊಮ್ಮೆ ಮೋದಿ ಭಾಷಣ; ಲಾಕ್’ಡೌನ್ ವಿಸ್ತರಣೆ… ಜೊತೆಗೆ ಒಂದಷ್ಟು ಟಿಪ್ಸ್.. ಪ್ರಧಾನಿಯತ್ತ ಎಲ್ಲರ ಚಿತ್ತ

ಲಾಕ್ ಡೌನ್ ಅವಧಿಯ ಅಂತಿಮ ಹಂತದಲ್ಲಿದ್ದೇವೆ. ಆದರೆ ಕೊರೋನಾ ಕರಾಳತೆಯ ಕ್ಲೈಮ್ಯಾಕ್ಸ್ ಹಂತಕ್ಕೆ ನಾವಿನ್ನೂ ತಲುಪಿಲ್ಲ. ಪರಿಸ್ಥಿತಿ ಹತೋಟಿಗೆ ಬರುವವರೆಗೂ ಸವಾಲನ್ನು ಎದುರಿಸಲೇಬೇಕು. ಹಾಗಾಗಿ ಎಲ್ಲರ ಚಿತ್ತ ಮೋದಿ ಭಾಷಣದತ್ತ ನೆಟ್ಟಿದೆ.

ಬೆಂಗಳೂರು: ಕೊರೋನಾ ಭೀತಿ ಕಾರಣಕ್ಕಾಗಿ ಜಾರಿಯಲ್ಲಿರುವ ಲಾಕ್’ಡೌನ್ ಅವಧಿಯ ಅಂತಿಮ ಹಂತದಲ್ಲಿದ್ದೇವೆ. 21 ದಿನಗಳ ಕಾಲ ಲಾಕ್’ಡೌನ್ ಘೋಷಿಸಲಾಗಿದ್ದರೂ ಸೋಂಕಿನ ಪ್ರಮಾಣ ಕಡಿಮೆಯಾಗಿಲ್ಲ. ಹಾಗಾಗಿ ಮತ್ತೆ ಲಾಕ್’ಡೌನ್ ವಿಸ್ತರಣೆಯಾಗುತ್ತೋ ಅಥವಾ ಸೀಲ್’ಡೌನ್ ಘೋಷಣೆಯಾಗುತ್ತೋ ಎಂಬ ಕುತೂಹಲ ಹೆಚ್ಚಾಗಿದೆ.

ಲಾಕ್ ಡೌನ್ ಅವಧಿ ಏಪ್ರಿಲ್ 14ಕ್ಕೆ ಪೂರ್ಣಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಅಂದೇ ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಕಚೇರಿ, ಏಪ್ರಿಲ್ 14ರಂದು ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದೆ.

 ರಾಜ್ಯಗಳ ಸಲಹೆಗಳಿಗೆ ಮೋದಿ ಜೈ?

ದೇಶಾದ್ಯಂತ ಜಾರಿಯಲ್ಲಿರುವ  21 ದಿನಗಳ ಲಾಕ್’ಡೌನ್ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದು ಹೇಳಲು ಸಾಧ್ಯವಿಲ್ಲ. ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಸೋಂಕು ಹರಡುವುದನ್ನು ತಡೆಯುವಲ್ಲಿ ಈವರೆಗಿನ ಲಾಕ್’ಡೌನ್ ಸಹಕಾರಿಯಾಗಿದೆ. ಹಲವು ದಿನಗಳ ಹಿಂದೆಯೇ ಹರಡಿರುವ ವೈರಾಣು ಹಲವರಲ್ಲಿ ತಡವಾಗಿ ಪರಿಣಾಮ ಬೀರಿರಬಹುದು. ಹಾಗಾಗಿ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವ ಉದ್ದೇಶದಿಂದ ಇನ್ನಷ್ಟು ದಿನಗಳ ಕಾಲ ಲಾಕ್’ಡೌನ್ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ.. ಏ.30ರ ವರೆಗೆ ಲಾಕ್’ಡೌನ್.. ಕೆಲವೆಡೆ ಸೀಲ್’ಡೌನ್? ಪರಿಸರ, ಪರಿಸ್ಥಿತಿ ಹೇಗಿರುತ್ತೆ ಗೊತ್ತಾ?

ಈ ಸಂಬಂಧ ಶನಿವಾರದಂದು ಪ್ರಧಾನಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ್ದು, ದೆಹಲಿ, ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳ ಸಿಎಂಗಳು ಲಾಕ್’ಡೌನ್ ಅವಧಿಯನ್ನು ಏಪ್ರಿಲ್ 30ರ ವರೆಗೆ ವಿಸ್ತರಿಸಲು ಸಲಹೆ ಮಾಡಿದ್ದರು.

ಈ ನಡುವೆ ಲಾಕ್’ಡೌನ್ ಅವಧಿಯನ್ನು ವಿಸ್ತರಿಸುವ ಜೊತೆಗೆ ಕೆಲವೊಂದು ಸೂಕ್ಷ್ಮ ಪ್ರದೇಶಗಳನ್ನು ಸೀಲ್’ಡೌನ್ ಮಾಡುವ ಅಗತ್ಯದ ಬಗ್ಗೆಯೂ ಪ್ರಧಾನಿ ಮೋದಿಯವರು ನಿರ್ಧಾರ ಪ್ರಕಟಿಸುವ ಸಾಧ್ಯತೆಗಳೂ ಇವೆ. ಅಷ್ಟೇ ಅಲ್ಲ, ಸಂಕಷ್ಟದಲ್ಲಿ ಸಿಲುಕಿರುವ ಜನತೆಗೆ ಕೆಲ ಟಿಪ್ಸ್ ಹೇಳುವ ಜೊತೆಗೆ ಅಗತ್ಯ ಯೋಜನೆಗಳನ್ನೂ ಘೋಷಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ.. ಕೊರೋನಾ ಕೇಸ್ ಹೆಚ್ಚಳದ ಹಿಂದಿನ ನಿಗೂಢತೆ ಗೊತ್ತಾ..? 

 

Related posts