ಕಳೆ ಕಟ್ಟಿದ ಸಾಂಸ್ಕೃತಿಕ ತಂಡಗಳ ಪ್ರದರ್ಶನ, ಹಬ್ಬದ ಸಡಗರ

ಬೆಂಗಳೂರು: ಕುವೆಂಪು ಜನ್ಮ ದಿನದ ಪ್ರಯುಕ್ತ ಮಲ್ಲೇಶ್ವರಂನಲ್ಲಿ ವಿವಿಧ ಸಾಂಸ್ಕೃತಿಕ ತಂಡಗಳ ಪ್ರದರ್ಶನದೊಂದಿಗೆ ಹಬ್ಬದ ವಾತಾವರಣ ಕಂಡುಬಂತು. ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿ.ಸೋಮಶೇಖರ್, ಸಾ.ರಾ.ಗೋವಿಂದು ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾಗಿದ ಕನ್ನಡಿಗರ ಚೈತನ್ಯ ರಥದ ಮೆರವಣಿಗೆಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಕುವೆಂಪು ಅವರ ಚಿತ್ರವನ್ನುಳ್ಳ ಭಿತ್ತಿಪತ್ರದೊಂದಿಗೆ 50ಕ್ಕೂ ಹೆಚ್ವು ಅಟೊಗಳು ಮಲ್ಲೇಶ್ವರಂನ ವಿವಿಧ ರಸ್ತೆಗಳ ಮೂಲಕ ಸಾಗಿ ಗಮನ ಸೆಳೆದವು.

ಈ ವೇಳೆ, ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸರ್ವಕಾಲಕ್ಕೂ ಸಲ್ಲುವ ಕುವೆಂಪು ಅವರ ಸಾಹಿತ್ಯ ಕೃತಿಗಳನ್ನು ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಿಗೆ ಅನುವಾದ ಮಾಡಿಸಿ ಜಗತ್ತಿನೆಲ್ಲೆಡೆಯ ಓದುಗರಿಗೆ ಅವನ್ನು ಲಭ್ಯವಾಗಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕುವೆಂಪು ಅವರ ಸಾಹಿತ್ಯವು ಕಾಲದ ತೆಕ್ಕೆಯನ್ನು ಮೀರಿದ್ದು. ಇತ್ತೀಚೆಗೆ ಅವರ ಸಮಗ್ರ ಸಾಹಿತ್ಯದ 12,000 ಪುಟಗಳನ್ನು ಡಿಜಿಟಲೀಕರಣ ಮಾಡಿಸುವ ಮೂಲಕ ಪ್ರಪಂಚದ ಮೂಲೆಮೂಲೆಯಲ್ಲೂ ಲಭ್ಯವಾಗುವಂತೆ ಮಾಡಲಾಗಿದೆ. ಅದೇ ರೀತಿಯಲ್ಲಿ ಅವರ ಸಾಹಿತ್ಯದ ಅನುವಾದವೂ ಎಲ್ಲೆಡೆ ಸಿಗುವಂತೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವರೂ ಆದ ಅವರು ಹೇಳಿದರು.

ದೈನಂದಿನ ಜೀವನದಲ್ಲಿ ಭಾಷೆ ಬಳಕೆಗೆ ಇರುವ ಅಡ್ಡಿಗಳನ್ನು ನಿವಾರಿಸುವುದಕ್ಕಾಗಿ ಕನ್ನಡ ತಂತ್ರಜ್ಞಾನ ತಂಡವನ್ನು ರಚಿಸಲಾಗಿದೆ. ನಾಡು-ನುಡಿಯ ವಿಷಯದಲ್ಲಿ ಆಸಕ್ತರಾದವರನ್ನು ಒಳಗೊಳ್ಳಿಸಿಕೊಂಡು ಕನ್ನಡ ನುಡಿಗಟ್ಟನ್ನು ಈಗಿನ ಬೆಳವಣಿಗೆಗಳಿಗೆ ಅನುಗುಣವಾಗಿ ಸಶಕ್ತಗೊಳಿಸುವ ಕಾರ್ಯವನ್ನು ಈ ತಂಡ ಮಾಡಲಿದೆ ಎಂದು ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು

Related posts