ದಕ್ಷಿಣ ಕನ್ನಡ ಕಾಂಗ್ರೆಸ್’ಗೂ ಪುಣ್ಯಭೂಮಿ; ದೇಶಕ್ಕೆ ಸಂಸ್ಕೃತಿ ಕೊಟ್ಟ ಪವಿತ್ರ ಭೂಮಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಈ ದೇಶಕ್ಕೆ ಸಂಸ್ಕೃತಿ ಕೊಟ್ಟ ಪವಿತ್ರ ಭೂಮಿ. ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಪಕ್ಷವಾಗಿ ಪರಿವರ್ತಿಸುವ ಕಾಯಕಲ್ಪವನ್ನು ಇಲ್ಲಿಂದ ಆರಂಭಿಸುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಬಂಟ್ವಾಳದಲ್ಲಿ ಮೈಸೂರು ವಿಭಾಗದ ವಿವಿಧ ಜಿಲ್ಲೆಗಳ ಮುಖಂಡರ ಜತೆ ಸಮಾಲೋಚನೆ ಹಾಗೂ ಸಂಕಲ್ಪ ಸಭೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ವಿದ್ಯಾದಾನ, ಆರ್ಥಿಕ ಶಕ್ತಿ ಕೊಟ್ಟ ಭೂಮಿ. ಈ ಭೂಮಿಯನ್ನು ಈಗ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಈ ಭೂಮಿಯಲ್ಲಿ ಮತದಾರರು ಯಾರಿಗೆ ಬೆಂಬಲ ನೀಡುತ್ತಾರೋ ಅವರ ಸರ್ಕಾರ ಬಂದಿರೋದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ. ಈ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗುತ್ತಿದೆ ಎಂದರು.

ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದರೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ಕಾರ್ಯಕರ್ತರ ಧ್ವನಿ ಅಧ್ಯಕ್ಷರ ಧ್ವನಿಯಾಗಬೇಕು. ಹೀಗಾಗಿ ಮೈಸೂರು ವಿಭಾಗದ ನಾನಾ ಜಿಲ್ಲೆಗಳ ಎಲ್ಲ ಅಧ್ಯಕ್ಷರು, ಸೋತ ಅಭ್ಯರ್ಥಿಗಳನ್ನು ಆಹ್ವಾನಿಸಿ, ಸ್ಥಳೀಯ ಸಮಸ್ಯೆಗಳೇನಿವೆ? ಎಂಬುದನ್ನು ಆಲಿಸುತ್ತಿದ್ದೇವೆ. ನಾವದನ್ನು ಜನರ ಮುಂದೆ ಇಡುತ್ತೇವೆ ಎಂದರು.

ಸ್ಥಳೀಯ ಸಮಸ್ಯೆ ಜತೆಗೆ ಸಂಘಟನೆ ವಿಚಾರವಾಗಿ ಪ್ರತಿಯೊಬ್ಬ ಬ್ಲಾಕ್ ಅಧ್ಯಕ್ಷರೂ ಮಾತನಾಡಲಿದ್ದಾರೆ. ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಆಗಿ ಪರಿವರ್ತಿಸುತ್ತೇವೆ ಎಂದು ಪ್ರತಿಜ್ಞಾ ದಿನ ತಿಳಿಸಿದ್ದೇವೆ. ಈಗ ಆ ಸಂಕಲ್ಪವನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದವರು ಹೇಳಿದರು.

Related posts