ಸ್ಮಾರ್ಟ್ ಕಾಮಗಾರಿ ಅವಾಂತರ; ಸಾರ್ವಜನಿಕರ ಆಕ್ರೋಶ ತಣಿಸಲು ಶಾಸಕರ ಹರಸಾಹಸ

ಮಂಗಳೂರು ನಗರದಲ್ಲಿ ಸ್ಮಾರ್ಟ್ ಯೋಜನೆಯ ಕಾಮಗಾರಿ ನಡೆಯುತ್ತಿರುವ‌ ಹಿನ್ನೆಲೆಯಲ್ಲಿ ಉಂಟಾದ ಟ್ರಾಫಿಕ್ ಜಾಮ್ ಸಮಸ್ಯೆ ಉಲ್ಬಣಗೊಂಡಿದ್ದು ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತಮ್ಮ ಸಿಟ್ಟು ಹೊರಹಾಕುತ್ತಿದ್ದು ಈ ಹಿನ್ನೆಲೆಯಲ್ಲಿ ಮಂಗಳೂರು‌ ಶಾಸಕ‌ ವೇದವ್ಯಾಸ್ ಕಾಮತ್ ಅವರು ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು, ಕೆಯುಡಿಎಫ್ಸಿ ಇಲಾಖೆಯ ಅಧಿಕಾರಿಗಳು ಹಾಗೂ ಬಸ್ ಮಾಲಕರ ಸಂಘದ ಅದ್ಯಕ್ಷರು ಈ ಸಭೆಯಲ್ಲಿ ಭಾಗವಹಿದ್ದರು.

ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸುವಂತೆ ಶಾಸಕ‌ ವೇದವ್ಯಾಸ್ ಕಾಮತ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಿವಿಎಸ್ ಜಂಕ್ಷನ್ ನಿಂದ ನೇರವಾಗಿ ಕೆ.ಎಸ್ ರಾವ್ ರಸ್ತೆಗೆ ತೆರಳಲು ಅವಕಾಶ ಕಲ್ಪಿಸಿ ಕೊಡಬೇಕು. ಕೆ.ಎಸ್ ರಾವ್ ರಸ್ತೆಯಿಂದ ಹಳೆಯ ಸರ್ವಿಸ್ ಬಸ್ ಸ್ಟಾಂಡ್, ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ (ಲೈಟ್ ಹೌಸ್ ಹಿಲ್ ರಸ್ತೆ) ಸಂಪರ್ಕ ಒದಗಿಸುವ‌ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ ಎಂದವರು ಹೇಳಿದರು.

ಅದೇ ರೀತಿ ಕೆ.ಎಸ್ ರಾವ್ ರಸ್ತೆಯ ಮೂಲಕ ಬರುವ ವಾಹನಗಳು ವಿ.ಟಿ ರಸ್ತೆಗೆ ತಿರುಗಲು ಹಾಗೂ ಶರವು ದೇವಸ್ಥಾನ ರಸ್ತೆಯಿಂದ ಜಿ.ಎಚ್.ಎಸ್ ರಸ್ತೆಯ ಮೂಲಕ ಕ್ಲಾಕ್ ಟವರ್ ತೆರಳಲು ಅವಕಾಶ ಕಲ್ಪಿಸಿಕೊಡಬೇಕು. ಸ್ಟೇಟ್ ಬ್ಯಾಂಕ್ ಪರಿಸರದಿಂದ ಬರುವ‌ ವಾಹನಗಳಿಗೆ ಹಂಪನಕಟ್ಟೆ, ಕೆ.ಎಸ್ ರಾವ್ ರಸ್ತೆ, ಯೆನಪೋಯ ಆಸ್ಪತ್ರೆಯ ಮೂಲಕ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ. ಅಥವ‌ ಕೆ.ಎಸ್ ರಾವ್ ರಸ್ತೆಯಿಂದ ಹಳೇ ಸರ್ವಿಸ್ ಬಸ್‌ ಸ್ಟ್ಯಾಂಡ್ ಮೂಲಕ‌ ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆಯ ಮೂಲಕ ಹೋಗಲು ಅವಕಾಶ‌ ನೀಡಲಾಗುತ್ತದೆ ಎಂದು ಶಾಸಕ ಕಾಮತ್ ತಿಳಿಸಿದರು.

ಶಾರದಾ ವಿದ್ಯಾಲಯ ರಸ್ತೆಯಲ್ಲಿ‌ ಸಂಚಾರಕ್ಕೆ ಅವಕಾಶ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಪ್ರಗತಿ ಹಂತದಲ್ಲಿರುವ‌ ಬಂದರ್ ಪ್ರದೇಶದಲ್ಲಿ ರಾತ್ರಿಯ ವೇಳೆ ಕಾಮಗಾರಿ ನಡೆಸಿ ಹಗಲು ಹೊತ್ತಿನಲ್ಲಿ ಸಂಚಾರಕ್ಕೆ ತೊಡಕಾಗದಂತೆ ಕಾರ್ಯ ನಿರ್ವಹಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾಳೆಯಿಂದ ಜನರಿಗೆ ಸಮಸ್ಯೆಯಾಗದಂತೆ ಮತ್ತು ಟ್ರಾಫಿಕ್‌ ಸಮಸ್ಯೆ ಉದ್ಭವಿಸದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೂ ಸೂಚಿಸಲಾಗಿದೆ ಎಂದರು.

Related posts