ಲಾಕ್ ಡೌನ್ ಹಿನ್ನೆಲೆ; ಯೋಧರಂತಿದ್ದಾರೆ ಮಣಿಪಾಲದ ಯುವ ಸೇನಾನಿಗಳು

ಎಲ್ಲೆಲ್ಲೂ ಲಾಕ್ ಡೌನ್ ಪರಿಸ್ಥಿತಿ.. ಅದರಿಂದಾಗಿ ಎಲ್ಲೆಲ್ಲೂ ಅಸಹಾಯಕರಾದ ಜನ. ಈ ಸಂದಿಗ್ದ ಕಾಲದಲ್ಲಿ ನೆರವಿಗೆ ಧಾವಿಸುವವರೇ ಈ ಯುವಜನ ತಂಡ..

ಮಣಿಪಾಲ: ಹೇಳಿಕೊಳ್ಳೋಕೆ ಯುವ ಸೇವಾ ಸಂಘ ಎಂಬ ಪುಟ್ಟ ಹೆಸರು.. ಆದರೆ ಇವರು ಮಾಡುವ ಮಹಾತ್ಕಾರ್ಯ ತಿಳಿದರೆ ಎಲ್ಲರೂ ಮೂಕವಿಸ್ಮಿತರಾಗುತ್ತಾರೆ. ಪ್ರಸ್ತುತ ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಹಾಗಾಗಿ ಎಲ್ಲೆಲ್ಲೂ ಜನರಿಗೆ ಸಂಕಷ್ಟ ಕಾಲ. ಅಂಗಡಿ ಮುಂಗಟ್ಟುಗಳಿಲ್ಲದೆ ಅಗತ್ಯ ವಸ್ತುಗಳಿಗೂ ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಮಣಿಪಾಲದ ದುಗ್ಲಿಪದವಿನ ‘ಯುವ ಸೇವಾ ಸಂಘ’ ಅಭಿನಂದನಾರ್ಹ ಸೇವೆ ಸಲ್ಲಿಸುತ್ತಿದೆ.

ದುಗ್ಲಿಪದವಿನ ‘ಯುವ ಸೇವಾ ಸಂಘ’ದ ಸದಸ್ಯರು ಮಣಿಪಾಲ ಸುತ್ತಮುತ್ತಲ ಅಸಾಹಾಯಕ ಕುಟುಂಬಗಳನ್ನು ಪತ್ತೆಹಚ್ಚಿ ಅವರಿಗೆ ನೆರವು ನೀಡುವ ಕಾಯಕದಲ್ಲಿ ತೊಡಗಿದೆ. ಸೋಮವಾರವೂ ಈ ಸಂಘದ ಸದಸ್ಯರು ಸಾವಿರಾರು ಅಸಾಹಾಯಕರನ್ನು ಭೇಟಿಯಾಗಿ ಅಗತ್ಯ ವಸ್ತುಗಳನ್ನು ಹಂಚಿದರು.  ತರಕಾರಿ ಹಾಗೂ ಪಡಿತರ ಸರಿಯಾಗಿ ಸಿಗದ ಜಾಕಕ್ಕೆ ತೆರಳಿ, ತರಕಾರಿ ಹಾಗೂ ಅಡುಗೆಗೆ ಬೇಕಾದ ವಸ್ತುಗಳನ್ನೊಳಗೊಂಡ ಕಿಟ್’ಗಳನ್ನೂ ವಿತರಿಸಿದರು. ಏಕಕಾಲದಲ್ಲಿ ವಿವಿಧ ತಂಡಗಳಲ್ಲಿ ಈ ಯುವಕರು ಈ ವಿತರಣಾ ಕಾರ್ಯದಲ್ಲಿ ತೊಡಗಿ ಗಮನ ಸೆಳೆಯುತ್ತಿದ್ದಾರೆ.

ವೈದ್ಯಕೀಯ ನೆರವಿನ ಹಸ್ತ

ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಸಾಮಾಗ್ರಿ, ಹಣ್ಣು-ತರಕಾರಿ ವಿತರಣೆ ಸಾಮಾನ್ಯ. ಆದರೆ ವೈದ್ಯಕೀಯ ಅಗತ್ಯತೆಯನ್ನು ಪೂರೈಸುವವರು ಎಷ್ಟು ಮಂದಿ ಇದ್ದಾರೆ? ಈ ಸಂಘದ ಸದಸ್ಯರು ಈ ಕೆಲಸದಲ್ಲೂ ಮುಂದಿದ್ದಾರೆ.

ಶುಗರ್, ಬಿಪಿ, ಹಾಗೂ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿರುವ ಮಂದಿ ನಿತ್ಯದ ಔಷಧಿಗಾಗಿ ಈ ಲಾಕ್ ಡೌನ್ ವೇಳೆ ಪರಿತಪಿಸುತ್ತಿದ್ದಾರೆ. ಅಲ್ಲೋ ಇಲ್ಲೋ ಮೆಡಿಕಲ್ ಶಾಪ್’ಗಳು ತೆರೆದಿದ್ದರೂ ಔಷದಿ ಪೂರೈಕೆಯಾಗುತ್ತಿಲ್ಲವಂತೆ. ಇದರಿಂದ ಸಂಕಷ್ಟಕ್ಕೊಳಗಾದವರನ್ನು ಗುರುತಿಸಿ ಅಗತ್ಯ ಔಷಧಿ ಪೂರೈಸುವ ಅನನ್ಯ ಕೆಲಸವನ್ನೂ ದುಗ್ಲಿಪದವಿನ ‘ಯುವ ಸೇವಾ ಸಂಘ’ದ ಸೇನಾನಿಗಳು ಮಾಡುತ್ತಿದ್ದಾರೆ.

ಸೇವೆ ಇದೇ ಮೊದಲಲ್ಲ

ಪ್ರಕೃತಿ ವಿಕೋಪ ಹಾಗೂ ಅನೇಕ ತುರ್ತು ಸಂದರ್ಭಗಳಲ್ಲಿ ಸಮಾಜಮುಖಿ ಕೆಲಸಕ್ಕಿಳಿಯುವ ಈ  ‘ಯುವ ಸೇವಾ ಸಂಘ’ದ ಸದಸ್ಯರು, ಈ ವರೆಗೆ ಕ್ಯಾನ್ಸರ್, ಕಿಡ್ನಿ ವೈಫಲ್ಯಕ್ಕೊಳಗಾದ ಮಂದಿಗೆ ಲಕ್ಷಾಂತರ ರುಪಾಯಿಯ ಚಿಕಿತ್ಸೆ ಕೊಡಿಸಿದ್ದಾರೆ. ಅಪಘಾತ ಸಂದರ್ಭದಲ್ಲೂ ಹಲವರಿಗೆ ತುರ್ತು ವೈದ್ಯಕೀಯ ನೆರವನ್ನೂ ನೀಡಿ ಜನಮೆಚ್ಚುಗೆಯ ಕೆಲಸ ಮಾಡಿದ್ದಾರೆ. ಇದೀಗ ಕೊರೋನಾ  ವಕ್ಕರಿಸಿರುವ ಈ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಅನಿವಾರ್ಯವಾಗಿದ್ದು ಇಂತಹಾ ಕಠಿಣ ಕಾಲದಲ್ಲಿ ತಮ್ಮ ಪರಿಸರದ ಜನರು ತೊಂದರೆಗೆ ಸಿಲುಕಬಾರದೆಂಬ ನಿಟ್ಟಿನಲ್ಲಿ ಈ ಯುವಕರು ವಿವಿಧ ತಂಡಗಳಲ್ಲಿ ಅಸಹಾಯಕರ ನೆರವಿಗೆ ನಿಂತಿದ್ದಾರೆ. ಇದು ನಿಜಕ್ಕೂ ಅಭಿನಂದನಾರ್ಹ ಕಾರ್ಯ..

Related posts