ದೇಶದಲ್ಲೇ ಪ್ರಥಮ.. ‘ಫಿಷ್ ವೇಪರ್ಸ್’ ಘಟಕಕ್ಕೆ ಮಂಗಳವಾರ ಶಿಲಾನ್ಯಾಸ

ಉಡುಪಿ: ಫಿಶ್ ಕರಿ, ಫಿಶ್ ಫ್ರೈ, ಹೀಗೆ ಮೀನಿನ ವಿವಿಧ ಖಾದ್ಯಗಳನ್ನು ನೀವು ಸವಿದಿರಬಹುದು. ಆದರೆ ಮೀನಿನ ಚಿಪ್ಸ್ ತಿಂದಿದ್ದೀರಾ? ಇದೀಗ ‘ಫಿಷ್ ವೇಪರ್ಸ್’ ಮೇನಿಯಾ ಸೃಷ್ಟಿಸುವ ಪ್ರಯತ್ನಕ್ಕೆ ಕರಾವಳಿ ಮೂಲದ ಉದ್ಯಮಿ ಮುಂದಾಗಿದ್ದಾರೆ. ಈ ಮಹತ್ವಾಕಾಂಕ್ಷೆಯ ಫಿಷ್ ವೇಪರ್ಸ್ ತಯಾರಿಕಾ ಘಟಕ, ಮೀನಿನ ಮೌಲ್ಯವರ್ಧಿತ ಖಾದ್ಯಗಳ ಈ ಉತ್ಪಾದನಾ ಘಟಕಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಲಿದೆ. ಉಡುಪಿ ಜಿಲ್ಲೆ ಬೈಂದೂರು ಸಮೀಪದ ಎಲ್ಲೂರು ಎಂಬಲ್ಲಿ ಫಿಷ್ ವೇಪರ್ಸ್ ಫ್ಯಾಕ್ಟರಿ ಸ್ಥಾಪನೆಯಾಗಲಿದ್ದು ದೇಶದಲ್ಲೇ ವಿಶೇಷ ಎಂಬಂತೆ ಮೀನಿನಿಂದ ವಿವಿಧ ತಿನಿಸುಗಳು ಇಲ್ಲಿ ತಯಾರಾಗಲಿದೆ.

ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಸಾಮಾಜಿಕ ಕಾರ್ಯಕರ್ತರೂ ಆದ ಉದ್ಯಮಿ ಗೋವಿಂದ ಬಾಬು ಪೂಜಾರಿ ಈ ಉದ್ಯಮದ ಮೂಲಕ ಮೀನುಗಾರರ ಪಾಲಿಗೆ ಆಶಾವಾದಿಯಾಗಿದ್ದಾರೆ. ಮತ್ಯೋದ್ಯಮ ಉತ್ತೇಜನ ಉದ್ದೇಶದಿಂದ ಈ ವಿನೂತನ ಉದ್ದಿಮೆಗೆ ಮುನ್ನುಡಿ ಬರೆಯಲಾಗುತ್ತಿದ್ದು, ಮೀನಿನಿಂದ ಚಿಪ್ಸ್ ತಯಾರಿಸುವ ಸುಧಾರಿತ ಅವಿಷ್ಕಾರ ಈ ಉದ್ಯಮಿಯ ಗರಡಿಯಲ್ಲಿ ಸಾಧ್ಯವಾಗಲಿದೆ.

ಏನಿದು ಫಿಷ್ ವೇಪರ್ಸ್?

ಮೀನುಗಾರಿಕೆ ಕರಾವಳಿಯ ಸಾಂಪ್ರದಾಯಿಕ ಕಸುಬುಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ಆಹಾರ ಕ್ಷೇತ್ರಕ್ಕಷ್ಟೇ ಅಲ್ಲ, ಫಿಷ್ ಆಯಿಲ್ ಸಹಿತ ವಿವಿಧ ಉತ್ಪನ್ನಗಳಿಗಾಗಿ ರಫ್ತಾಗುತ್ತವೆ. ಆದರೂ ಮತ್ಯೋದ್ಯಮ ಕ್ಷೇತ್ರ ಆರ್ಥಿಕವಾಗಿ ಬಡವಾಗಿದ್ದು ಮೀನಿಗೆ ಬೇಡಿಕೆ ಸೃಷ್ಟಿಸಿ ಮೀನುಗಾರ ಕುಟುಂಬಕ್ಕೆ ವರದಾನವಾಗುವ ರೀತಿ ಉದ್ದಿಮೆ ಸ್ಥಾಪಿಸುವಲ್ಲಿ ದೇಶದ ಪ್ರತಿಷ್ಟಿತ ಆಹಾರೋದ್ಯಮ ಸಂಸ್ಥೆ ‘ಶೆಫ್ ಟಾಕ್’ ಸಂಸ್ಥೆಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿಯವರು ‘ಮತ್ಸ್ಯ ಬಂಧನ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ನೂತನ ಸಂಸ್ಥೆಯು ಮೀನಿನಿಂದಲೇ ವೇಪರ್ಸ್ ತಯಾರಿಸಲಿದೆ.
ಸದ್ಯ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಉತ್ಪಾದನೆ ನಡೆದಿದ್ದು, ಈ ಹೊಸ ರೀತಿಯ ಫಿಷ್ ವೇಪರ್ಸ್ ಸಂಶೋಧಕರು ಹಾಗೂ ಆಹಾರೋದ್ಯಮ ಕ್ಷೇತ್ರದ ಗಣ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗಷ್ಟೇ ಈ ಹೊಸ ಚಿಪ್ಸ್ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಈ ಫಷ್ ವೇಪರ್ ತಯಾರಿಕೆಯ ಸಾಧನೆ ಬಗ್ಗೆ ಶಹಬ್ಬಾಸ್ ವ್ಯಕ್ತಪಡಿಸಿದ್ದಾರೆ.

ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಗರಾಭಿವೃದ್ಧಿ ಮಂತ್ರಿ ಬೈರತಿ ಬಸವರಾಜ್ ಮೊದಲಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರಷ್ಟೇ ಅಲ್ಲ, ತಮ್ಮ ಇಲಾಖೆಯ ಶ್ರೀಮಂತಿಕೆ ಬಗ್ಗೆ ಹೊಂಗನಸು ಹೊತ್ತಿರುವ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಎಲ್.ದೊಡ್ಡಮನಿ ಹಾಗೂ ಅಧಿಕಾರಿಗಳೂ ಕೂಡಾ ಫುಲ್ ಖುಷ್.

ಕರಾವಳಿಯಲ್ಲಿ ನೆಲೆ

ಮೀನಿನ ಮೌಲ್ಯವರ್ಧಿತ ಖಾದ್ಯಗಳ ಈ ಉತ್ಪಾದನಾ ಘಟಕಕ್ಕೆ ಬೈಂದೂರು ಸಮೀಪದ ಎಲ್ಲೂರು ಎಂಬಲ್ಲಿ ಜನವರಿ 19ರಂದು ಸಚಿವರಾದ ಎಸ್.ಅಂಗಾರ ಉಪಸ್ಥಿತಿಯಲ್ಲಿ ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಂಸದರಾದ ಬಿ.ವೈ.ರಾಘವೇಂದ್ರ, ಶಾಸಕರಾದ ಸುಕುಮಾರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಲಾಲಾಜಿ ಮೆಂಡನ್, ಉಮಾನಾಥ್ ಕೋಟ್ಯಾನ್, ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಸಹಿತ ಅನೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮತ್ಸ್ಯ ಬಂಧನ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.

 

‘ಮತ್ಸ್ಯಬಂಧನ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಫಿಷ್ ವೇಪರ್ಸ್ ತಯಾರಿಕಾ ಘಟಕವು, ಆಹಾರೋದ್ಯಮ ಕ್ಷೇತ್ರದ ಪ್ರಸಿದ್ಧ ಕಂಪೆನಿಯಾಗಿರುವ ‘ಶೆಫ್ ಟಾಕ್’ನ ಅಂಗ ಸಂಸ್ಥೆಯಾಗಿದೆ. ಈ ಉದ್ಯಮವು ಮೀನು ಪ್ರಿಯರಿಗೆ ಸ್ವಾದಿಷ್ಟ ತಿನಿಸು ನೀಡುವ ಜೊತೆಗೆ ರಾಜ್ಯವ್ಯಾಪಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಲಿದೆ. ಈ ಉದ್ಯೋಗ ಪರಿಕಲ್ಪನೆಯಂತೆ ಗೋವಿಂದ ಬಾಬು ಪೂಜಾರಿ ಈ ಮತ್ಸ್ಯ ಬಂಧನದ ಪ್ರಯತ್ನ ನಡೆಸಿದ್ದಾರೆ.

Related posts