ಮೂಡಬಿದ್ರೆಯಲ್ಲಿ ಕಾರ್ಮಿಕರ ಅತಂತ್ರ ಸ್ಥಿತಿ; ತವರಿಗೆ ಮರಳಲು ಅವಕಾಶಕೊಡಿ; ಸರ್ಕಾರಕ್ಕೆ ಕೇಳಲಿಲ್ಲವೇ ಸಂತ್ರಸ್ತರ ಕೂಗು?

ಮಂಗಳೂರು: ಕೊರೋನಾ ವಿಚಾರ ಈ ದಶಕದಲ್ಲೇ ಅತ್ಯಂತ ಭೀಕರತೆಯ ಪರಿಸ್ಥಿತಿ ಎಂಬುದು ಸತ್ಯ. ಇಂತಹಾ ಸ್ಥಿತಿಯಲ್ಲಿ ಸೋಂಕಿಲ್ಲದವರೂ ಪರಿತಪಿಸುವಂತಾಗಿದೆ. ಒಂದೆಡೆ ಲಾಕ್ ಡೌನ್ ಆದೇಶ, ಇನ್ನೊಂದೆಡೆ ಕೆಲಸವೂ ಇಲ್ಲದೆ ಬದುಕಲು ಆಸರೆಯೂ ಇಲ್ಲದೆ ಪರಿತಪಿಸುವ ಸಾವಿರಾರು ಕುಟುಂಬಗಳ ವೇದನೆ ಹೇಳತೀರದು.

ಇವರು ಜೈನಕಾಶಿ ಮೂಡಬಿದ್ರೆಯಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಬಡಪಾಯಿ ಕೂಲಿಕಾರ್ಮಿಕರು. ಇವರು ಕಳೆದ ವಾರದವರೆಗೂ ಕೂಲಿ ಕೆಲಸ ಮಾಡಿ ಒಪ್ಪೊತ್ತಿನ ಊಟ ಮಾಡುತ್ತಿದ್ದರು. ಯಾವಾಗ ಕೊರೋನಾ ಕಾರಣಕ್ಕಾಗಿ ಲಾಕ್ ಡೌನ್ ಆದೇಶ ಹೊರಬಿತ್ತೋ  ಅದಾಗಲೇ ಕೂಲಿ ಕೆಲಸವೂ ಸ್ಥಬ್ಧವಾಯಿತು. ಕಾರ್ಖಾನೆಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ಸಿಕ್ಕಿತಾದರೂ ರಸ್ತೆ ಕೆಲಸ, ತೋಟದ ಕೆಲಸಗಳನ್ನು ಮಾಡುತ್ತಿದ್ದ ಕೂಲಿ ಕಾರ್ಮಿಕರು ಅಕ್ಷರಶಃ ಬೀದಿಗೆ ಬಿದ್ದರು. ಇವರು ಅದೇ ಈ ದುರ್ದೈವಿಗಳು. ಇವರೆಲ್ಲರೂ ಕಾಯಕ ಅರಸಿ ಕರಾವಳಿಗೆ ಬಂದವರು. ಇದೀಗ ಕೆಲಸವೂ ಇಲ್ಲ, ಅತ್ತ ಮನೆ ಮಂದಿಯೂ ಇಲ್ಲ ಎಂಬಂತಿದ್ದಾರೆ.

ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆಯೇ ಈ ಬಡಪಾಯಿ ಕೂಲಿ ಕಾರ್ಮಿಕರು ತಮ್ಮ ಕೆಲಸದ ಸ್ಥಳದಿಂದ ಹೊರದೂಡಲ್ಪಟ್ಟರು. ಬಂಟ್ವಾಳ ಸುತ್ತಮುತ್ತ ಕೆಲಸ ಮಾಡುತ್ತಿದ್ದ ಈ ಕೂಲಿ ಕಾರ್ಮಿಕರು ತಮ್ಮ ಊರಾದ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯಪುರ ಮೊದಲಾದ ಜಿಲ್ಲೆಗಳಿಗೆ ತೆರಳಲೇಬೇಕಾಯಿತು. ಬಸ್ಸುಗಳು ಸ್ಥಗಿತಗೊಂಡಿದ್ದರಿಂದ ಕಾಲ್ನಡಿಗೆಯಲ್ಲೇ ಸಾಗಿದ ಇವರ ಪೈಕಿ, ಅನೇಕರು ಮಾರ್ಗಮಧ್ಯೆ ಮೂಡಬಿದ್ರೆ ತಲುಪುವಷ್ಟರಲ್ಲಿ ಅಸ್ವಸ್ಥರಾದರು.

ಮುಂದೇನು ಎಂದು ದಿಕ್ಕು ತೋಚದಂತಾದಾಗ ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ಇವರಿದ್ದ ಕಡೆ ಧಾವಿಸಿ ಬಂದವರು ಮಾಜಿ ಶಾಸಕ ಅಭಯಚಂದ್ರ ಜೈನ್. ಇವರ ಸಲಹೆಯಂತೆ ಮೂಡಬಿದ್ರೆಯ ಸಂಘ ಸಂಸ್ಥೆಗಳು, ಸ್ಥಳೀಯ ಕಾರ್ಯಕರ್ತರು ಪಕ್ಷಾತೀತವಾಗಿ ಈ ಸಂತ್ರಸ್ತರ ನೆರವಿಗೆ ಧಾವಿಸಿದರು. ಈ ಸಂತ್ರಸ್ತರಿಗೆ ಊಟ ತಿಂಡಿ ವ್ಯವಸ್ಥೆ ಮಾಡಿದ ಅಭಯಚಂದ್ರ ಜೈನ್, ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಈ ಬಡಪಾಯಿಗಳಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಅನಿವಾರ್ಯ. ಆದರೆ ಉತ್ತರಕರ್ನಾಟಕದಿಂದ ಕೆಲಸಕ್ಕಾಗಿ ಬಂದಿರುವ ಈ ಸಾವಿರಾರು ಬಡಪಾಯಿಗಳು ಅಕ್ಷರಶಃ ಬೀದಿಯಲ್ಲಿದ್ದಾರೆ. ಯಾವುದೇ ಲಾಡ್ಜ್ ಸೇರುವಷ್ಟು ಶ್ರೀಮಂತರಲ್ಲ. ವಾಸ್ತವ್ಯಕ್ಕಾಗಿ ಮೂಡಬಿದ್ರಿಯಲ್ಲಿ ತಮ್ಮದೇ ಆದ ಮನೆಯೂ  ಇಲ್ಲ. ಗುಳೆ ಹೊರಟು ಬಂದಿರುವ ಇವರಿಗೆ ತಾತ್ಕಾಲಿಕ ಸೂರು ಒದಗಿಸಲು ಮೂಡಬಿದ್ರಿಯಲ್ಲಿ ಯಾರೂ ಒಪ್ಪುತ್ತಿಲ್ಲ. ಹಾಗಾಗಿ ಇವರು ತಮ್ಮಊರಿಗೆ ಹೋಗುವುದೊಂದೇ ಮಾರ್ಗ ಎನ್ನುತ್ತಾರೆ ಅಭಯಚಂದ್ರ ಜೈನ್.

ಈ ನಡುವೆ ಈ ಕೂಲಿಕಾರ್ಮಿಕರಿಗೆ ಊರಿಗೆ ಮರಳಲು ಅಭಯಚಂದ್ರ ಅವರು ತಮ್ಮದೇ ಖರ್ಚಿನಲ್ಲಿ ವಾಹನಗಳ ವ್ಯವಸ್ಥೆ ಮಾಡಿದ್ದಾರಾದರೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ, ಸಂಸದರು ಹಾಗೂ ಉತ್ತರಕರ್ನಾಟಕದ 50ಕ್ಕೂ ಹೆಚ್ಚು ಶಾಸಕರಲ್ಲಿ ತಾವು ಮನವಿ ಮಾಡಿದ್ದೇನೆ. ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಿರುವ ಅಭಯಚಂದ್ರರು, ಮುಖ್ಯಮಂತ್ರಿಗಳೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಹಲವು ದಿನಗಳಿಂದ ಮೂಡಬಿದ್ರೆಯಲ್ಲೇ ಅತಂತ್ರ ಸ್ಥಿತಿಯಲ್ಲಿರುವ ಈ ಕಾರ್ಮಿಕರು ಕ್ಷಣಕ್ಷಣಕ್ಕೂ ಆತಂಕದ ಸ್ಥಿತಿಯನ್ನು ಎದುರಿಸುತ್ತಿದ್ದು ಸರ್ಕಾರದ ತೀರ್ಮಾನವನ್ನು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

Related posts