ಪ್ರೌಢಶಾಲಾ ಸಂವೇದಾ ತರಗತಿ; ಸಮಯ ಬದಲು

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ದೂರದರ್ಶನ ಚಂದನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮದ ಸಮಯಗಳಲ್ಲಿ ಡಿಸೆಂಬರ್ 7 ರಿಂದ ಸ್ವಲ್ಪ ಬದಲಾವಣೆಯಾಗಿದ್ದು, ವಿದ್ಯಾರ್ಥಿಗಳು ಈ ಬದಲಾವಣೆಯನ್ನು ಗಮನಿಸಿ ತರಗತಿಗಳ ಸದುಪಯೋಪಡಿಸಿಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್-19 ಪ್ರಸರಣದ ಹಿನ್ನೆಲೆಯಲ್ಲಿ ಶಾಲೆಗಳ ಆರಂಭ ವಿಳಂಬವಾಗುತ್ತಿರುವುದರಿಂದ ಆಗಸ್ಟ್ ನಿಂದಲೇ 8, 9, 10 ನೇ ತರಗತಿಗಳಿಗೆ ಸಂವೇದಾ ಪಾಠಗಳು ನಡೆಯುತ್ತಿವೆ. ಪ್ರಸ್ತುತ ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ತರಗತಿಗಳ ಪ್ರಸಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಷಯಗಳಲ್ಲಿ ವಿಡಿಯೋ ಪಾಠಗಳ ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ-ಡಿ.ಎಸ್.ಇ.ಆರ್.ಟಿ ಬಿಡುಗಡೆ ಮಾಡಿದೆ. ತರಗತಿಗಳು ಬೆಳಗ್ಗೆ 7.00 ರಿಂದ 10.30 ರವರೆಗೆ ಮತ್ತು ಸಂಜೆ 5 ರಿಂದ 6.30 ರವರೆಗೆ ಪ್ರಸಾರವಾಗಲಿವೆ ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ, ಇಂಗ್ಲಿಷ್ (ಪ್ರಥಮ ಮತ್ತು ದ್ವಿತೀಯ), ಗಣಿತ, ವಿಜ್ಞಾನ, ಸಮಾಜ, ಸಂಸ್ಕೃತ ಪ್ರಥಮ, ಹಿಂದಿ ತೃತೀಯ, ಉರ್ದು ಪ್ರಥಮ ಭಾಷಾ ತರಗತಿಗಳು ಪ್ರಸಾರವಾಗುತ್ತಿವೆ. ಡಿ. 7 ರಿಂದ 13 ರವರೆಗೆ ಪ್ರಸಾರವಾಗುವ ವಿಷಯವಾರು ತರತಿಗಳ ವೇಳಾಪಟ್ಟಿಯನ್ನು ಡಿ.ಎಸ್.ಇ.ಆರ್.ಟಿ ಬಿಡುಗಡೆ ಮಾಡಿದೆ.
ಈ ತರಗತಿಗಳು ಬದಲಾದ ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ. ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಶಿಕ್ಷಕರು ಕಾರ್ಯಕ್ರಮದ ಅನುಪಾಲನೆ ಮಾಡಲಿದ್ದಾರೆ. ಈ ಪಾಠಗಳ ಕುರಿತಂತೆ ಆಯಾ ಜಿಲ್ಲೆಗಳ ಉಪನಿರ್ದೇಶಕರು ಮಕ್ಕಳಿಗೆ ತಲುಪುವಂತೆ ಹೆಚ್ಚಿನ ರೀತಿಯ ಪ್ರಚಾರ ಮಾಡಿ ಮಕ್ಕಳು ಸದುಪಯೋಗಪಡಿಸಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Related posts