ಕರ್ನಾಟಕ ಬಂದ್’ಗೆ ನೀರಸ ಪ್ರತಿಕ್ರಿಯೆ

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಬೇಕೆಂಬ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಸಂಘಟನೆಗಳ ಒಕ್ಕೂಟ ಈ ರಾಜ್ಯ ಬಂದ್’ಗೆ ಕರೆ ನೀಡಿದ್ದು ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಆದರೂ ಈ ಕರೆಗೆ ಅಷ್ಟೇನೂ ಬೆಂಬಲ ವ್ಯಕ್ತವಾಗಿಲ್ಲ.

ರಾಜ್ಯದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಕನ್ನಡ ಸಂಘಟನೆಗಳು ಬೆಂಗಳೂರಿನ ಮೌರ್ಯ ವೃತ್ತದ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ. ಈ ಧರಣಿ 99 ದಿನ ಕ್ರಮಿಸಿದ್ದು ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಕರ್ನಾಟಕ ಬಂದ್’ಗೆ ಕರೆ ನೀಡಲಾಗಿದೆ ಎಂದು ಕನ್ನಡ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಬಸ್ ಮೇಲೆ ಕಲ್ಲು ತೂರಾಟ, ದಾವಣಗೆರೆ ಸಹಿತ ಕೆಲವೆಡೆ ರಸ್ತೆಗಳಲ್ಲಿ ಟಾಯರ್ ಸುಟ್ಟ ಘಟನೆಗಳನ್ನು ಹೊರತುಪಡಿಸಿ ರಾಜ್ಯದ ಜನರಿಗೆ ಬಂದ್ ಬಿಸಿ ಅಷ್ಟೇನೂ ತಟ್ಟಿಲ್ಲ.

ಬೆಂಗಳೂರಿನಲ್ಲೂ ಬಂದ್ ಬಿಸಿ ಗೊತ್ತಾಗಿಲ್ಲ. ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ಎಂದಿನಂತಿವೆ. ಕೆಲ ಟ್ಯಾಕ್ಸಿ ಸೇವೆಗಳು ಜನರಿಗೆ ಸಿಕ್ಕಿಲ್ಲವಾದರೂ ಸಾರಿಗೆ ವ್ಯವಸ್ಥೆ ಏರುಪೇರಾಗಿಲ್ಲ. ಶಾಲಾ ಕಾಲೇಜುಗಳ ದೈನಂದಿನ ಚಟುವಟಿಕೆಯೂ ಏರುಪೇರಾಗಿಲ್ಲ.
ಬಂದ್ ಕರೆ, ಪ್ರತಿಭಟನೆ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

Related posts