ಡಿ.14, 15ರಂದು ವಿಧಾನಸಭೆಯಲ್ಲಿ ‘ಒಂದು ರಾಷ್ಟ್ರ-ಒಂದು ಚುನಾವಣೆ’ ಚರ್ಚೆ

ಬೆಂಗಳೂರು: ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯ ಕುರಿತು ಎರಡು ದಿನಗಳ ಕಾಲ ವಿಧಾನಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ. ಡಿಸೆಂಬರ್ 14 ಮತ್ತು 15ರಂದು ರಾಜ್ಯ ವಿಧಾನಸಭೆಯಲ್ಲಿ ಈ ಚರ್ಚೆ ನಡೆಯಲಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇರಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ.

ಡಿಸೆಂಬರ್ 07 ರಿಂದ 15 ರ ವರೆಗೆ ನಡೆಯಲಿರುವ 15 ನೇ ವಿಧಾನಸಭೆಯ ಎಂಟನೇ ಅಧಿವೇಶನದ ಮುಖ್ಯಾಂಶಗಳ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ಒದಗಿಸಿದ ಅವರು, ನವೆಂಬರ್ 25 ಮತ್ತು 26 ರಂದು ಗುಜರಾತ್ ನ ಕೆವಾಡಿಯಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 80ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭಾರತದಲ್ಲೇ ಪ್ರಪಥಮವಾಗಿ ಈ ವಿಷಯವನ್ನು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ ಚಿಂತನ-ಮಂಥನ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ಎಲ್ಲಾ ಮಜಲುಗಳ ಚರ್ಚೆ ಪೂರ್ಣ ಪ್ರಮಾಣದಲ್ಲಿ ಆಗಬೇಕೆಂಬ ಸದುದ್ದೇಶದ ಹಿನ್ನೆಲೆಯಲ್ಲಿ ತಾವು ಈಗಾಗಲೇ ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ರಾಜ್ಯ ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜಾತ್ಯಾತೀತ ಜನತಾದಳದ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪ್ರಸ್ತಾಪಿಸಿ ಈಗಾಗಲೇ ಎಲ್ಲರ ಸಹಕಾರವನ್ನು ಕೋರಿರುವುದಾಗಿ ಸಭಾಧ್ಯಕ್ಷರು ತಿಳಿಸಿದರು.

ಡಿಸೆಂಬರ್ 07 ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಒಳಗೊಂಡಂತೆ ಎಲ್ಲಾ ಕಾರ್ಯಕಲಾಪಗಳು ಇರುತ್ತವೆ ಎಂದು ಸ್ವಷ್ಟಪಡಿಸಿದ ಅವರು, ಸದನದಲ್ಲಿ ಹತ್ತು ವಿಧೇಯಕಗಳು ಮಂಡನೆಗೆ ಸಿದ್ಧವಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ಹಿಂದೆ ಕೈಗೊಂಡ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.

Related posts