ಪ್ರತಿಜ್ಞಾ ಕಾರ್ಯಕ್ರಮಕ್ಕೆ ಸಿಎಂ ಅನುಮತಿ ಕೊಟ್ಟಿದ್ದಾರೆ, ಪೊಲೀಸರು ಅಡಚಣೆ ಮಾಡುವಂತಿಲ್ಲ: ಡಿ.ಕೆ.ಶಿ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮ ಪ್ರತಿಜ್ಞಾಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನುಮತಿ ನೀಡಿದ್ದಾರೆ. ಹಾಗಾಗಿ ಪೊಲೀಸರು ಈ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬುಧವಾರ ಮಾಧ್ಯಮಗಳಿಗೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, ನಾಳೆ ನಡೆಯಲಿರುವ ಪ್ರತಿಜ್ಞಾ ಕಾರ್ಯಕ್ರಮಕ್ಕೆ ಕೆಲವು ಕಡೆ ಪೊಲೀಸರು ತೊಂದರೆ ನೀಡುತ್ತಿದ್ದಾರೆ ಎಂಬ ಕರೆಗಳು ಬಂದಿವೆ ಎಂದರು. ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿಗಳೇ ಅನುಮತಿ ಕೊಟ್ಟಿದ್ದಾರೆ. ಈ ಸಂಬಂಧ ಗೃಹ ಮಂತ್ರಿಗಳು, ಪೊಲೀಸ್ ಮಹಾನಿರ್ದೇಶಕರ ಜತೆ ಮಾತನಾಡಿದ್ದೇನೆ. ಯಾರು ಧೃತಿಗೆಡುವ ಅಗತ್ಯವಿಲ್ಲ ಎಂದವರು ಹೇಳಿದರು.

ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ಅನುಮತಿ ನೀಡಿದ್ದು, ಈ ಕಾರ್ಯಕ್ರಮಕ್ಕೆ ಲಿಖಿತ ಅನುಮತಿ ಬೇಕಿಲ್ಲ. ನಿಮ್ಮ ನಿಮ್ಮ ಪ್ರದೇಶಗಳಲ್ಲೇ ಇದ್ದು ಸುದ್ದಿ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸಿ. ನಾನು ಆಮಂತ್ರಣ ನೀಡಿರುವವರನ್ನು ಬಿಟ್ಟು ಇನ್ಯಾರು ಇಲ್ಲಿಗೆ ಬರಬೇಡಿ. ಕಟ್ಟಡ ನಿರ್ವಹಣೆಯನ್ನು ಪೊಲೀಸರು ಹಾಗೂ ಸೇವಾದಳದವರಿಗೆ ವಹಿಸಿದ್ದು, ಅನಗತ್ಯವಾಗಿ ಬಂದು ತೊಂದರೆ ಅನುಭವಿಸುವುದು ಬೇಡ ಎಂದು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಟಿವಿ ಹಾಗೂ ಜೂಮ್ ಮೂಲಕ ನಿಮ್ಮ ಪ್ರದೇಶಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ತಾವೆಲ್ಲಾ ಸಹಕಾರ ನೀಡಬೇಕು ಎಂದೂ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

Related posts