ಪುಲಿಕೇಶೀನಗರ ರಾಜಕೀಯ; ಯಾರು ಈ ಅಚ್ಚರಿಯ ಯುವ ನಾಯಕ?

ಬೆಂಗಳೂರು: ರಾಜ್ಯ ರಾಜಕಾರಣ ದಿನಕ್ಕೊಂದು ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಕಳೆದ ಲೋಕಸಭಾ ಸಮರದಲ್ಲಿ ಬೆಂಗಳೂರು ದಕ್ಷಿಣಾ ಲೋಕಸಭಾ ಕ್ಷೇತ್ರಕ್ಕೆ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ಆಯ್ಕೆ ಮಾಡಿದಂತೆ, ಕೆಲ ಸಮಯದ ಹಿಂದೆ ಕಾಂಗ್ರೆಸ್ ಕೂಡಾ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಡಿ.ಕೆ.ರವಿ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸಿ ಅಚ್ಚರಿಗೆ ಕಾರಣವಾಗಿತ್ತು. ಇದೀಗ ಅಂಥದ್ದೇ ಕುತೂಹಲಕಾರಿ ಬೆಳವಣಿಗೆಗೆ ಬೆಂಗಳೂರಿನ ಪುಲಿಕೇಶಿನಗರ ಕ್ಷೇತ್ರ ಕೂಡಾ ಕಾರಣವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಒಂದು ಮೂಲದ ಪ್ರಕಾರ ಈವರೆಗೂ ಮೀಸಲು ಕ್ಷೇತ್ರವಾಗಿರುವ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ ಮುಂದಿನ ಚುನಾವಣಾ ಹೊತ್ತಿಗೆ ಮೀಸಲಾತಿಯಿಂದ ಮುಕ್ತವಾಗಲಿದೆ ಎಂದು ಹೇಳಲಾಗುತ್ತಿದೆ. ಅಂತಹಾ ಸಂದರ್ಭದಲ್ಲಿ ತಾವು ಕೈ ಚಿಹ್ನೆಯಿಂದ ಸ್ಪರ್ಧಿಸಬೇಕೆಂದು ಪ್ರಯತ್ನದಲ್ಲಿದ್ದ ಮಾಜಿ ಮೇಯರ್ ಸಂಪತ್ ಕುಮಾರ್ ಅವರು ಗಲಭೆ ಆರೋಪಕ್ಕೊಳಗಾಗಿದ್ದಾರೆ. ಈವರೆಗೂ ಕೈ ಶಾಸಕರಾಗಿರುವ ಅಖಂಡ ಶ್ರೀನಿವಾಸಮೂರ್ತಿ ಬಗ್ಗೆ ಕಾಂಗ್ರೆಸ್ ನಾಯಕರು ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನವೂ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಕ್ಷೇತ್ರದಲ್ಲಿ ಪ್ರಭಾವಿಯಾಗಿರುವ ಉಸ್ಮಾನ್ ಷರೀಫ್ ಅವರ ಹೆಸರು ಕೇಳಿಬರುತ್ತಿದೆ.

ಯಾರು ಈ ಉಸ್ಮಾನ್ ಷರೀಫ್?

ಮೂಲತಃ ಉದ್ಯಮಿಯಾಗಿರುವ ಉಸ್ಮಾನ್ ಷರೀಫ್ ಉದ್ಯಾನನಗರಿ ಬೆಂಗಳೂರಿನಲ್ಲಿ ಸಾಮಾಜಿಕ ಹರಿಕಾರ ಎಂದೇ ಗುರುತಾಗಿದ್ದಾರೆ. ಹಲವಾರು ದಶಕಗಳಿಂದ ಮುಸ್ಲಿಮರ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಧಾರ್ಮಿಕ ಕೈಂಕರ್ಯಗಳ ಮುಂದಾಳುತ್ವ ವಹಿಸಿ ಧಾರ್ಮಿಕವಲಯದಲ್ಲಿ ಚಿರಪರಿಚಿತವಾಗಿರುವ ಷರೀಫ್ ಪರಿವಾರದ ಕೊಂಡಿ ಇವರು. ಜುಮ್ಮಾ ಮಸೀದಿ ಟ್ರಸ್ಟ್, ಬೆನ್ಸನ್ ಟೌನ್ ಖಾದ್ರಿಯಾ ಮಸೀದಿ, ಕಮರ್ಷಿಯಲ್ ಸ್ಟ್ರೀಟ್ ಜಾಮಿಯಾ ಮಸೀದಿಗಳ ಟ್ರಸ್ಟೀಯಾಗಿದ್ದಾರೆ. ವಕ್ಫ್ ಬೋರ್ಡ್’ನ ಮೌಲಾನಗಳ ಭಾಂಗೀ ಸಾಹೇಬ್ ಅವರ ವೇತನ ಹೆಚ್ಚಳ ಕುರಿತ ಸುದೀರ್ಘ ಹೋರಾಟದ ರೂವಾರಿಯೇ ಇವರು.

ಹಿಂದೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಇಸ್ಮಾಯಿಲ್ ಷರೀಫ್ ಅವರ ಮಗ ಉಸ್ಮಾನ್ ಷರೀಫ್ ಅವರ ಹೆಸರು ಈಗ ಕಾಂಗ್ರೆಸ್ ಪಾಳಯದಲ್ಲಿ ಮುನ್ನೆಲೆಗೆ ಬಂದಿರುವುದು.
ಇಸ್ಮಾಯಿಲ್ ಷರೀಫ್ ನಿಧನಾನಂತರ ಷರೀಫ್ ಪರಿವಾರವು ರಾಜಕೀಯದಿಂದ ದೂರ ಉಳಿದಿದೆಯಾದರೂ ಧಾರ್ಮಿಕ ಕೈಂಕರ್ಯ ಹಾಗೂ ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿ ಷರೀಫ್ ಪರಿವಾರದ ಫೌಂಡೇಶನ್ ಸಕ್ರಿಯವಾಗಿರುವುದರಿಂದ ವಿವಿಧ ಕ್ಷೇತ್ರಗಳ ಗಣ್ಯರು ಆ ಫೌಂಡೇಶನನನ್ನು ಮುನ್ನಡೆಸುತ್ತಿರುವ ಉಸ್ಮಾನ್ ಷರೀಫ್ ಅವರನ್ನು ರಾಜಕೀಯಕ್ಕೆ ಕರೆತರಲು ಮುಂದಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಪುಲಿಕೇಶೀನಗರ ಕ್ಷೇತ್ರದಲ್ಲಿ ಇಂತಹಾ ಜನಾನುರಾಗಿ ನಾಯಕ ಬೇಕಿದೆ ಎಂಬುದು ಈ ನಾಯಕರ ಅಭಿಪ್ರಾಯ.

ಲಾಕ್’ಡೌನ್ ಅವಧಿಯ ಕಾರ್ಯಕ್ಕೆ ಮೆಚ್ಚುಗೆ

ಮಹಾಮರಿ ಕೊರೋನಾದಿಂದಾಗಿ‌ ನಾಡಿನ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ನಿತ್ಯವೂ ಮರಣ ಮೃದಂಗ ಕೇಳಿಬರುತ್ತಿದ್ದುದರಿಂದಾಗಿ ಜನ‌ಭೀತಿಗೊಳಗಾಗಿದ್ದಾರೆ. ಕೊರೋನಾ ನಿಯಂತ್ತಣ ಸಂಬಂಧ ಲಾಕ್‌ಡೌನ್ ಜಾರಿಯಲ್ಲಿದ್ದಾಗ ಲಕ್ಷಾಂತರ ಜನ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದರು. ಕೆಲಸವೂ ಇಲ್ಲದೆ, ಊಟ ತಿಂಡಿಯೂ ಸಿಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಅಸಹಾಯಕರಿಗೆ ಬೆಂಗಳೂರಿನ Anwar Sharieff Foundation and Karol Foundation ಸಹಾಯಹಸ್ತ ಚಾಚಿತ್ತು.

ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಸಿಲಿಕಿದ ಕುಟುಂಬಗಳಿಗೆ ಹಲವಾರು ವರ್ಷಗಳಿಂದ ನೆರವು ನೀಡುತ್ತಾ ಬಂದಿದ್ದ ಸಮಾಜ ಸೇವಕ ಉಸ್ಮಾನ್ ಷರೀಫ್, ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಉಸ್ತುವಾರಿಯ ಅನ್ವರ್ ಷರೀಫ್ ಫೌಂಡೇಶನ್ ಮೂಲಕ ಉದ್ಯಾನನಗರಿಯ ಮಾರುತಿ ಸೇವಾನಗರ, ಫ್ರೇಜರ್ ಟೌನ್, ರಿಚಾರ್ಡ್ ಪಾರ್ಕ್, ಕಾಕ್ಸ್ ಟೌನ್, ಶಿವಾಜಿನಗರ, ಬೆನ್ಸನ್ ಟೌನ್, ಹಲಸೂರು, ಚಾಮರಾಜಪೇಟೆ, ಬಾಣಸವಾಡಿ, ಕೆ.ಆರ್‌.ಪುರ, ಆರ್.ಟಿ.ನಗರ, ಹೆಬ್ಬಾಳ ಮೊದಲಾದ ಬಡಾವಣೆಗಳಲ್ಲಿ ಅಸಹಾಯಕರಿರುವ ಸ್ಥಳ ಗುರುತಿಸಿ ಅಗತ್ಯ ಪಡಿತರ ವಸ್ತುಗಳನ್ನು ವಿತರಿಸಿದ್ದರು.
ಸಾವಿರಾರು ಮಂದಿ ಯುವಕರ ತಂಡ ಕಟ್ಟಿ ಸಾವಿರಾರು ಮಂದಿ ಕೊರೋನಾ ಸೋಂಕಿತರಿಗೆ, ಕೊರೋನಾ ವಾರಿಯರ್ಸ್’ಗೆ ಔಷಧದ ನೆರವನ್ನೂ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅದರಲ್ಲೂ ಪುಲಿಕೇಶೀ ನಗರ, ಸರ್ವಜ್ಞನಗರ ಕ್ಷೇತ್ರವ್ಯಾಪ್ತಿಯಲ್ಲಿ ಜಾತಿ-ಧಾರ್ಮ ಎನ್ನದೆ ಇವರು ಮಾಡಿರುವ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ. ಹಾಗಾಗಿ ಇವರನ್ನೇ ಕಣಕ್ಕಿಳಿಸಿದರೆ ಪುಲಿಕೇಶಿನಗರವನ್ನು ಉಳಿಸಿಕೊಳ್ಳಬಹುದೆಂಬುದು ಕೈ ನಾಯಕರ ಲೆಕ್ಕಾಚಾರ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಸ್ಮಾನ್ ಷರೀಫ್, ತಾವು ಈವರೆಗೂ ಅಸಹಾಯಕರ ಬಗ್ಗೆ ಗಮನ ಕೇಂದ್ರೀಕರಿಯಿದ್ದೇನೆ. ಚುನಾವಣಾ ಅಥವಾ ಸ್ಪರ್ಧೆ ಬಗ್ಗೆ ಈ ವರೆಗೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದಿದ್ದಾರೆ. ಜನರೇ ತಮ್ಮ ಆಪ್ತರು. ಹಾಗಾಗಿ ಅವರ ಆಶಯಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುವುದಾಗಿ ಉಸ್ಮಾನ್ ಷರೀಫ್ ತಿಳಿಸಿದ್ದಾರೆ.

Related posts