ಬಿಜೆಪಿ ಸರ್ಕಾರಕ್ಕೂ ಬಿಸಿ ತುಪ್ಪವಾದ ಸಾಹುಕಾರ್

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ರೆಬೆಲ್ ಆಗಿ, ಹೆಚ್ಡಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನೇ ಕೆಡವಿದ್ದ ರಮೇಶ್ ಜಾರಕಿಹೊಳಿ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಸವಾಲಾಗಿ ಪರಿಣಮಿಸಿದ್ದಾರೆ.

ಕಾಂಗೇಸ್ ಪಾಲುದಾರಿಕೆಯ ಸರ್ಕಾರವಿದ್ದಾಗ ಬಂಡಾಯವೆದ್ದ ತನ್ನ ಜೊತೆಗಿದ್ದವರಿಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದವರು ರಮೇಶ್ ಜಾರಕಿಹೊಳಿ. ಬಿಜೆಪಿ ಸೇರುವಾಗ ಬಿ.ಎಸ್.ವೈ. ಬಳಿಯೂ ಇದೇ ಬೇಡಿಕೆಯನ್ನು ಮುಂದಿಡಲಾಗಿತ್ತು. ಅದಕ್ಕೆ ಸೈ ಎಂದಿದ್ದ ಯಡಿಯೂರಪ್ಪ ಇದೀಗ ಕೈಕೊಟ್ಟಿದ್ದಾರೆ. ಬಿ.ಎಸ್.ವೈ. ಅವರ ಈ ನಡೆಯಿಂದಾಗಿ ಜಾರಕಿಹೊಳಿ ಟೀಮ್ ಕೆಂಡಾಮಂಡಲವಾಗಿದೆ. ಬಂಡಾಯ ಏಳುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ರಮೇಶ್ ಜಾರಕಿಹೊಳಿ ಈಗ ಬಿಜೆಪಿ ಸರ್ಕಾರಕ್ಕೂ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ.

ಮಹೇಶ್ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡದಿರುವ ಬಗ್ಗೆ ಮತ್ತೆ ಮತ್ತೆ ಅಸಮಾಧಾನ ಹೊರಹಾಕುತ್ತಿರುವ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ತೊರೆದು, ಶಾಸಕ ಸ್ಥಾನಕ್ಕೆ ಮಹೇಶ್ ಕುಮಟಳ್ಳಿಗೆ ರಾಜೀನಾಮೆ ನೀಡಿದ್ದರಿಂದಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಿರುವಾಗ ಕುಮಟಳ್ಳಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಕುಮಟಳ್ಳಿಗೆ ಸಚಿವ ಸ್ಥಾನ ಸಿಗದಿದ್ದರೆ ನಾನೂ ಕೂಡಾ ಮಂತ್ರಿ ಸ್ಥಾನ ತೊರೆಯಲು ಸಿದ್ಧ ಎಂಬ ಎಚ್ಚರಿಕೆಯ ಸಂದೇಶವನ್ನು ಅವರು ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ. ರಮೇಶ್ ಜಾರಕಿಹೊಳಿಯವರ ಈ ನಿಲುವು ಬಿ.ಎಸ್.ವೈ ಅವರನ್ನು ಸಂದಿಗ್ಧ ಸ್ಥಿತಿಯತ್ತ ತಂದು ನಿಲ್ಲಿಸಿದೆ.

ಈ ನಡುವೆ ಸಚಿವ ಜಗದೀಶ್ ಶೆಟ್ಟರಾದಿಯಾಗಿ ಬಿಜೆಪಿ ಹಿರಿಯ ನಾಯಕರು ರಮೇಶ್ ಜಾರಕಿಹೊಳಿಯವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಗೆ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಂತ್ರಿಗಿರಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಹೇಳುವ ಮೂಲಕ ಜಾರಕಿಹೊಳಿ ನೋವಿಗೆ ಮುಲಾಮು ಹಚ್ಚುವ ಪ್ರಯತ್ನ ಮಾಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿಯ ಅಸಮಾಧಾನ ಮಾತ್ರ ತಣ್ಣಗಾಗಿಲ್ಲ. ಮುಂದೇನು ಎಂಬ ಚಿಂತೆ ಕಮಲಾ ನಾಯಕರನ್ನು ಕಾಡಿದೆ.

Related posts