ಮುರುಡೇಶ್ವರ ದೇಗುಲ ಅಭಿವೃದ್ಧಿಯ ರೂವಾರಿಗೆ ಶ್ರದ್ದಾಂಜಲಿಯ ಮಹಾಪೂರ

ಬೆಂಗಳೂರು: ದೇಶ ವಿದೇಶಗಳ ಉದ್ಯಮ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಆರ್​.ಎನ್. ಶೆಟ್ಟಿ ಇನ್ನಿಲ್ಲ. ಗುರುವಾರ ಮುಂಜಾನೆ ಬೆಂಗಳೂರಿನಲ್ಲಿ ಹೃದಯಾಘಾತಕ್ಕೊಳಗಾಗಿ ಅವರು ಕೊನೆಯುಸಿರೆಳೆದಿದ್ದಾರೆ.

1928ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಹುಟ್ಟಿದ ಆರ್​.ಎನ್. ಶೆಟ್ಟಿ ಯಶಸ್ವಿ ಉದ್ಯಮಿಯಾಗಿ ಗಮನಸೆಳೆದವರು. ಹುಟ್ಟೂರಾದ ಮುರುಡೇಶ್ವರ ದೇವಾಲಯದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದ ಆರ್​.ಎನ್. ಶೆಟ್ಟಿ, ದೇವಾಲಯ ಬಳಿ, ಸಮುದ್ರ ತೀರದಲ್ಲಿ ಬೃಹತ್ ಶಿವನ ಮೂರ್ತಿ, ಮುಗಿಲೆತ್ತರದ ರಾಜಗೋಪುರವನ್ನು ನಿರ್ಮಿಸಿ ಶ್ರೀ ಕ್ಷೇತ್ರದ ಖ್ಯಾತಿಯನ್ನು ಜಗತ್ತಿಗೆ ಸಾರಿದ್ದರು. ಮುರುಡೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಇದನ್ನು ಪ್ರವಾಸಿ ತಾಣವನ್ನಾಗಿ ರೂಪಿಸಿದ್ದರು.

ಯಶಸ್ವೀ ಉದ್ಯಮಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ಆರಂಭಿಸಿದ ಆರ್​.ಎನ್. ಶೆಟ್ಟಿ ಈ ಕ್ಷೇತ್ರದಲ್ಲಿ ಬೆಳೆಯುತ್ತಾ 1967ರಲ್ಲಿ ಆರ್​ಎನ್​ ಶೆಟ್ಟಿ ಆ್ಯಂಡ್ ಕಂಪನಿಯನ್ನು ಸ್ಥಾಪಿಸಿದರು. ಹೊನ್ನಾವರ-ಬೆಂಗಳೂರು ರಸ್ತೆಯ ಸೇತುವೆ ನಿರ್ಮಾಣ, ಹಿಡಕಲ್ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ, ಮಾಣಿ ಡ್ಯಾಂ, ವರಾಹಿ ಡ್ಯಾಂ ನಿರ್ಮಿಸಿ ಗಮನಸೆಳೆದಿದ್ದಾರೆ.

ಮಾರುತಿ ಉದ್ಯೋಗ್ ಲಿಮಿಟೆಡ್, ಆರ್​​ಎನ್​ಎಸ್​ ಮೋಟಾರ್ಸ್​, ಮುರುಡೇಶ್ವರ ಸೆರೆಮಿಕ್ಸ್, ನವೀನ್ ಹೋಟೆಲ್ ಲಿಸಂಸ್ಥಾಪಕರಾಗಿರುವ ಅವರು, ಆರ್​ಎನ್​ಎಸ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಸ್ಥಾಪಿಸಿ ಶಿಕ್ಷಣ ರಂಗದಲ್ಲಿಯೂ ಗಮನಸೆಳೆದಿದ್ದಾರೆ. ಮಂಗಳೂರು ಟೈಲ್ಸ್​ ಘಟಕ ಆರಂಭಿಸಿ ಸಾವಿರಾರು ಸ್ಥಳೀಯರಿಗೆ ಕೆಲಸ ಒದಗಿಸಿದವರು.

ಉದ್ಯಮಿ ಆರ್​.ಎನ್. ಶೆಟ್ಟಿ ನಿಧಾನಕ್ಕೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸೇರಿದಂತೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.

Related posts