ಆರೆಸ್ಸೆಸ್’ನ ಕೌತುಕದ ಮಣಿ..! ಈ ಹೊಳ್ಳರ ಬಗ್ಗೆ ನಿಮಗೆ ಗೊತ್ತೇ?

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ವೆಂಕಟರಮಣ ಹೊಳ್ಳರಿಗೆ ಶ್ರದ್ದಾಂಜಲಿಯ ಮಹಾಪೂರವೇ ಹರಿದುಬಂದಿದೆ. ಅಖಂಡ ಬ್ರಹ್ಮಾಚಾರ್ಯ ಮೂಲಕ ಆರೆಸ್ಸೆಸ್ ಭೀಷ್ಮ ಎಂದೇ ಕರಾವಳಿಯ ಕೇಸರಿ ಪಡೆಯಲ್ಲಿ ಗುರುತಿಸಿಕೊಂಡಿರುವ ವೆಂಕಟರಮಣ ಹೊಳ್ಳರ ಬಗ್ಗೆಯೇ ಇದೀಗ ಎಲ್ಲರಿಂದಲೂ ಗುಣಗಾನ. ಇದಕ್ಕೆ ಕಾರಣವೂ ಇದೆ. ದಕ್ಷಿಣ ಕನ್ನಡದ ಅದರಲ್ಲೂ ಪುತ್ತೂರು ಜಿಲ್ಲೆಯಲ್ಲಿ (ಆರೆಸ್ಸೆಸ್ ಪ್ರಕಾರ ಪುತ್ತೂರು ಒಂದು ಸಂಘಟನಾತ್ಮಕ ಜಿಲ್ಲೆ) ಬಹುತೇಕ ಕಾರ್ಯಕರ್ತರನ್ನು ಗುರುತಿಸಿ ಐಟಿಸಿ-ಒಟಿಸಿ ಮಾಡಿಸಿ ಸಂಗದ ಸೈನಿಕರನ್ನು ರೂಪಿಸಿದ ಹೆಗ್ಗಳಿಕೆ ಇವರದ್ದು. ಹಾಗಾಗಿಯೇ ಇವರ ನಿಧನದ ಸುದ್ದಿ ಅಪ್ಪಳಿಸಿದ ನಂತರವಂತೂ ಕರಾವಳಿಯ ಬಹುತೇಕ ಮನೆಗಳಲ್ಲಿ ಈಗ ಮೌನ ಆವರಿಸಿದೆ.

ಅಗ್ರ ಬೈಲು ವೆಂಕಟರಮಣ ಹೊಳ್ಳರ ಬಗ್ಗೆ ಗುಣಗಾನಗಳು ಸಾಗುತ್ತಿದ್ದರೆ, ಇನ್ನೊಂದೆಡೆ ಅವರ ಬದುಕಿನ ಚಿತ್ರಣವನ್ನು ತಿಳಿಯುವ ಹಂಬಲ ಹಲವರದ್ದು. ಅದಾಗಲೇ ಆರೆಸ್ಸೆಸ್ ಕಾರ್ಯಕರ್ತರೊಬ್ಬರು ಹೊಳ್ಳರ ಬದುಕು ಚಿತ್ರಣವನ್ನು ಬರೆದು ನ್ಯೂಸ್ ರೂಮ್’ಗೆ ಕಳುಹಿಸಿಕೊಟ್ಟಿದ್ದಾರೆ. ಈ ಬರಹವನ್ನು ಯಥಾರೀತಿ ಇಲ್ಲಿ ಪ್ರಕಟಿಸಲಾಗಿದೆ.

ಯಾರಿವರು ಹೊಳ್ಳರು?

ಇದ್ದರು ಇವರು ನಮ್ಮ ನಡುವೆ.. ಹೆಸರು ಅಗ್ರಬೈಲು ವೆಂಕಟರಮಣ ಹೊಳ್ಳ! ಬಂಟ್ವಾಳದ ಜೋಡುಮಾರ್ಗದ ಅಗ್ರ ಬೈಲು ತಿಮ್ಮಪ್ಪಯ್ಯ ಹೊಳ್ಳರು ಬಿಸಿ ರೋಡಿನ ಅಜ್ಜಿಬೆಟ್ಟು ಶಾಲೆಯ ಶಿಕ್ಷಕರಾಗಿ (ಹಳೆಯ ಕಾಲದ ಬಡ ಮೇಷ್ಟ್ರು) ನಿವೃತ್ತರಾದವರು. . ಹಿರಿಯ ಮಗನರಸಿಂಹ . ತುರ್ತುಪರಿಸ್ಥಿತಿಯ ವಿರೋಧಿ ಹೋರಾಟದಲ್ಲಿ ಪೊಲೀಸರ ಹಲ್ಲೆಯಿಂದ ಜರ್ಜರಿತ ರಾದವರು, ಮಗಳು ಜಯಲಕ್ಷ್ಮಿ ಗಂಡನ ಮನೆಯಿಂದ ಅನಾರೋಗ್ಯದ ಕಾರಣದಿಂದ ಮೂವರು ಮಕ್ಕಳೊಂದಿಗೆ ತವರು ಮನೆ ವಾಸ.ಕಿರಿಯ ಮಗನೇ ವೆಂಕಟರಮಣ.

ಅವಿವಾಹಿತರಾಗಿಯೇ ಇರುವ ಸಂಕಲ್ಪ ಮಾಡಿ ಕುಟುಂಬದ ಸೇವೆಯ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜವಾಬ್ದಾರಿ ಹೊತ್ತವರು. (ಕೊಡಗು , ಕಾಸರಗೋಡು,ಜಿಲ್ಲೆಯಿಂದ ಉಡುಪಿ ಜಿಲ್ಲೆಯ ವರೆಗೆ ಸೇರಿದ ಮಂಗಳೂರು ವಿಭಾಗದ ಅನ್ಯಾನ್ಯ ಜವಾಬ್ದಾರಿಯನ್ನು ಹಂತ ಹಂತದಲ್ಲಿ ನಿರ್ವಹಿಸಿ, ಬಳಿಕ ಗ್ರಾಮವಿಕಾಸದ ಮಂಗಳೂರು ವಿಭಾಗ ಸಂಯೋಜಕರಾಗಿ ಜವಾಬ್ದಾರಿ ಹೊಂದಿದ್ದರು.

ಕಿರಿಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ನತದೃಷ್ಟರು. ಸಂಘದ ಸಂಪರ್ಕ, ಶಾಖೆಯ ತುಡಿತ.ಗಡಿಯಾರದ ಮುಳ್ಳಿನ ಸದ್ದಿನಂತೆ ವೆಂಕಟ್ರಮಣ ಹೊಳ್ಳರ ಹೆಜ್ಜೆಯ ನಿರಂತರ ನಡಿಗೆ ಸಂಘದ ಕಡೆಗೆ. ಸಮಯಾ ಸಮಯ ಎನ್ನದೆ ಅಹರ್ನಿಶಿ ಪ್ರವಾಸ. ಮಂಗಳೂರು ವಿಭಾಗದ ಬೈಠಕ್ ಮುಕ್ತಾಯವಾಗುವುದು ಮಧ್ಯರಾತ್ರಿಯ ಬಳಿಕವೇ. ಅದೆಷ್ಟೇ ಸಮಯವಾದರೂ ಅವಸರಿಸದೆ ಹಲವು ಬಾರಿ 30 ಕಿಲೋ ಮೀಟರುಗಳಷ್ಟು ಕಾಲುನಡಿಗೆಯಲ್ಲಿ ಮನೆ ತಲುಪಿದ್ದೂ ಇದೆ. ಬಂದ ತಕ್ಷಣದ ಕಾರ್ಯವೆಂದರೆ ಅಪ್ಪನಿಗೆ ಅಡುಗೆ ಮಾಡಿ ಬಡಿಸುವುದೂ ಅಪರಾತ್ರಿಯಲ್ಲಿ!. ಇದು ಅಪ್ಪ ಮಕ್ಕಳ ನಡುವಿನ ಹೊಂದಾಣಿಕೆ. ಮತ್ತೆ ಎಂದಿನಂತೆ ಬೆಳಿಗ್ಗೆ ಬೇಗನೆ ಎದ್ದು ಮನೆದೇವರ ಪೂಜೆ ಮುಗಿಸಿ, ಚಟುವಟಿಕೆ ಆರಂಭ. ತಿಂಗಳಲ್ಲಿ ಹೆಚ್ಚಿನ ದಿನಗಳು ಸಂಘಕಾರ್ಯದ ಪ್ರವಾಸಕ್ಕೆ ಮೀಸಲು. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಈ ಶಬ್ದಕ್ಕೆ ಸಂಪೂರ್ಣ ಬದ್ದರಿವರು.

ಏಕಾದಶಿ ಮನೆಗೇ ದ್ವಾದಶಿ ಬಂತಂತೆ ಕುಟುಂಬ ಹೊಂದಿದು ಒಂದು ಎಕರೆಯ ತುಂಡು ಭೂಮಿ ಮಾತ್ರ. ಅದು ಕೂಡ ಕುಟುಂಬದ ದೇವತಾಂಶ ಭೂಮಿ. ಇನ್ನು ಆರ್ಟಿಸಿ ಇಲ್ಲ. ಅದರಲ್ಲೊಂದು ಹಳೆಯ ಹಂಚಿನ ಮನೆ ಅದನ್ನು ಮಠವೆಂದರೆ ತಪ್ಪಲ್ಲ. ಅಣ್ಣ ತುರ್ತು ಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ಪೊಲೀಸರಿಂದ ಜರ್ಜರಿತ ರಾಗಿ ಮಾನಸಿಕ ಆಘಾತಕ್ಕೆ ಒಳಗಾದ ವರು. ಅಕ್ಕ ತೀವ್ರ ಮಧುಮೇಹ ಕಾಯಿಲೆಯಿಂದ ಜರ್ಜರಿತ ಗೊಂಡವರು. ಸ್ವತಃ ತಾನು ತೀವ್ರ ಅಸ್ತಮಾ ಪೀಡಿತ ವ್ಯಕ್ತಿ. ಆದರೆ ಉಳಿದೆಲ್ಲರ ಅವಶ್ಯಕತೆಗೆ ಮನೆಯ “ಮಗಳಾಗಿ” ಕೆಲಸ ಮಾಡಿದವರು ವೆಂಕಟರಮಣ ಹೊಳ್ಳರು. ಕಳೆದ ಹತ್ತು ವರ್ಷಗಳ ಹಿಂದೆ ಅಪ್ಪ, ಅವರ ಹಿಂದೆ ಅಣ್ಣ, ಎರಡು ವರ್ಷಗಳ ಹಿಂದೆ ತೀವ್ರ ಕಾಯಿಲೆಯಿಂದ ಅಕ್ಕನೂ ಹೊರಟುಹೋದರು. ಆರ್ಥಿಕ ಸಂಕಟದ ಮೇಲೆ ಅನಾರೋಗ್ಯದ ದಾಳಿ ಜೊತೆಗೆಅಕ್ಕನ ಮಕ್ಕಳ ಜವಾಬ್ದಾರಿಯನ್ನು ಹೊತ್ತು ಶಿಕ್ಷಣ ಕೊಟ್ಟು ಸಲಹಿದ ಹೊಳ್ಳರದ್ದು ಪ್ರತ್ಯಕ್ಷ ತಾಯಿ ಹೃದಯ. ಉಪಜೀವನಕ್ಕೆ ಸಣ್ಣ ತೋಟ ತೆಂಗಿನ ಕೊಪ್ಪಲಿನ ಎಳೆನೀರಿನ ಮಾರಾಟದಿಂದ ಬಂದ ಹಣ ಮಾತ್ರ.

ನ ದೈ ನ್ಯಂ – ನ ಪಲಾಯನಂ

ತನ್ನ ಬಡತನ ದಾರಿದ್ರ್ಯವನ್ನು ತೋರ್ಪಡಿಸದೆ, ಯಾರೊಂದಿಗೂ ಸ್ವಂತಕ್ಕಾಗಿ ಕೈಯೊಡ್ಡದ ಸ್ವಾಭಿಮಾನಿ ಸಂತ.ಸ್ವಂತಕ್ಕೆ ಕನಿಷ್ಠ ಅವಶ್ಯಕತೆಗಳನ್ನು ಇಟ್ಟು ಕೊಂಡು, ಸಮಾಜದ ಕಾರ್ಯಕ್ಕೆ ಹೆಚ್ಚಿನ ಸಮಯವನ್ನು ಕೊಡುತ್ತಾ, ಪಾದರಸದಂತೆ ಓಡಾಡುತ್ತಾ ಪ್ರೇರಣಾದಾಯಿ ಬದುಕನ್ನು ಕಂಡವರು. ಕೊನೆಯವರೆಗೆ ಕಾಲಿಗೊಂದು ಚಪ್ಪಲಿ ಕೊಳ್ಳಲು ಅವರಿಗೆ ಪುರುಸೊತ್ತು ಸಿಗಲಿಲ್ಲ. ಕೈಯಲ್ಲೊಂದು ನೈಲಾನ್ ಚೀಲ ಹಿಡಿದುಕೊಂಡು ಹೊರಟಿದ್ದಾರೆ ಎಂದರೆ ಸಂಘಕಾರ್ಯದ ಪ್ರವಾಸ ಎಂದೇ ಅರ್ಥ. ವಾಹನ ವಿಲ್ಲದಿದ್ದಲ್ಲಿ ಅಡಚಣೆ ಏನು ಇಲ್ಲ ನಡೆದ ಹೋಗುವಂತ ಧೃಡ ಮನಸ್ಸು ಅವರದ್ದು. ಅವರ ಅವಿರತ ಹೋರಾಟ ಪರಿಶ್ರಮ ಅನಾರೋಗ್ಯದ ಮಧ್ಯೆಯು ಓಡಾಟದಿಂದ ಸಂತೃಪ್ತ. ಕೆಲವು ಸ್ವಯಂ ಸೇವಕರು, ಒಂದು ದ್ವಿಚಕ್ರ ವಾಹನವನ್ನು ಆಗ್ರಹಪೂರ್ವಕವಾಗಿ ಅವರ ವಿರೋಧದ ಮಧ್ಯೆ ಒಪ್ಪಿಸಿದ್ದರು. ಕಳೆದ ಆರೇಳು ವರ್ಷಗಳಿಂದ ಆ ರಥವನ್ನೇರಿದ ಅವರು ಅವಿಭಜಿತ ದಕ್ಷಿಣ ಕನ್ನಡ, ಕೊಡಗು, ಕಾಸರಗೋಡಿನ ಮೂಲೆಮೂಲೆಗಳಿಗೂ ಪ್ರವಾಸ ಮಾಡಿದ್ದರು.

ಹಣವಿಲ್ಲ ಹಣ ಹಂಬಲವಿಲ್ಲ

ಕೂಡಿಡುವುದಕ್ಕೆ ಅವರಲ್ಲಿ ಸಂಪಾದನೆ ಇರಲಿಲ್ಲ. ಸ್ವಂತದ ಉದ್ಯೋಗಕ್ಕಾಗಿ ಹೋದರೆ ಸಂಘ ಕಾರ್ಯಕ್ಕೆ ಹೆಚ್ಚು ಸಮಯ ಕೊಡಲಾರೆ. ಹಾಗಾಗಿ ಒಪ್ಪೊತ್ತು ಊಟ ಅಥವಾ ಗಂಜಿಯನ್ನು ಉಂಡು, ಪ್ರವಾಸಕ್ಕಾಗಿ ಹೊರಡುವುದು ಅವರ ದಿನಚರಿ. ದಿನದ 24 ಗಂಟೆಯನ್ನೂ ಸಮರ್ಥವಾಗಿ ಬಳಸಿಕೊಳ್ಳುವವರು. ನೆತ್ತರನ್ನು ಬೆವರಾಗಿಸಿ ಇರುವ ತುಂಡು ಭೂಮಿಯಲ್ಲಿ ಅಡಿಕೆ ಸಸಿಗಳನ್ನು ನೆಟ್ಟು ಇದೀಗ ಅದು ಫಲ ಬರುತ್ತಿದೆ! ಆದರೆ ಅವರೇ ಇಲ್ಲ ವಲ್ಲಾ. ಎರಡು ವರ್ಷದ ಹಿಂದೆ ಅಕ್ಕ ಕಾಲವಾದ ನಂತರ ಅವರ ಪ್ರವಾಸ ಇನ್ನೂ ಹೆಚ್ಚಿತು. ಅಕ್ಕನ ಮಗ ಶ್ರೀಧರನಿಗೆ ಮನೆಯನ್ನು ನೋಡಿಕೊಳ್ಳಲು ತಿಳಿಸಿ ಹೊರಟವರು ಡಿಸೆಂಬರ್ 14 ತಡರಾತ್ರಿ ಪುತ್ತೂರಿನ ಸಂಘ ಕಾರ್ಯದಲ್ಲಿ ಉಳಿದು ಮರುದಿನ ಬೆಳಿಗ್ಗೆ 15ರ ಮುಂಜಾನೆ ಬೆಳಕು ಹರಿಯುವುದಕ್ಕೂ ಮುಂಚೆ ಇಹಲೋಕವನ್ನೇ ತ್ಯಜಿಸಿದ್ದಾರೆ. ಪುತ್ತೂರು ಸಮೀಪ ಪೊಳ್ಯ ಎಂಬಲ್ಲಿ ರಸ್ತೆ ಅಪಘಾತದಲ್ಲಿ ಲಾರಿ ಅವರ ಮೇಲೆ ಹರಿದು ಸ್ಥಳದಲ್ಲೇ ಪ್ರಾಣ ಹೋಯಿತು. ಸುದ್ದಿ ತಿಳಿದು ಸಾವಿರಾರು ಸ್ವಯಂಸೇವಕರಿಗೆ ಬರ ಸಿಡಿಲು ಬಡಿದಂತಾಯಿತು.

ಹೊಳ್ಳರ ಪ್ರವಾಸ ಈಗ ಸ್ವರ್ಗ ವಾಸ. ಆರ್ಥಿಕ ಸ್ಥಿತಿ, ಅನಾರೋಗ್ಯ ಪರಿಸ್ಥಿತಿ, ಮನೆಯನ್ನು ಸಂಭಾಳಿಸಿದ ರೀತಿ, ಸಂಘ ಭಗವಂತನೆಂದು ನಂಬಿ ಸಮಾಜಮುಖಿಯಾದ ಹೊಳ್ಳರದ್ದು ಉಪ ಜೀವನದಿಂದ ಮೇಲೆದ್ದ ನಿಜ ಅರ್ಥದ ಜೀವನ.

Related posts