ಸಾಧಿಕ್ ಪಾಳ್ಯ ಘಟನೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುನ್ನುಡಿ

ಬೆಂಗಳೂರು: ಕೊರೋನಾ ವಿಚಾರವನ್ನು ಇಡೀ ರಾಷ್ಟ್ರ ಗಂಭೀರವಾಗಿ ಪರಿಗಣಿಸಿದ್ದರೆ, ಕೆಲ ವಿಚ್ಚಿದ್ರಕಾರಿ ಮನೋಭಾವದವರು ಈ ವಿಚಾರದಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಅತ್ತ ದೆಹಲಿಯಲ್ಲಿ ಕೊರೋನಾ ಸೋಂಕಿತರ ಆರೈಕೆ ನಿರತ ವೈದ್ಯರ ಮೇಲೆ ಉಗುಳಿ ದೌರ್ಜನ್ಯ ನಡೆಸಿರುವ ಘಟನೆ ಒಂದೆಡೆಯಾದರೆ, ಇನ್ನೊಂದೆಡೆ ಇಂದೋರ್‌ನ ಟಾಟಪಟ್ಟಿ ಬಖಾಲ್‌ನಲ್ಲಿ ಕೊರೋನಾ ಸೋಂಕು ಪರೀಕ್ಷೆಗೆ ತೆರಳಿದ್ದ ವೈದ್ಯರ ತಂಡದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇತ್ತ ಬೆಂಗಳೂರಿನ ಸಾಧಿಕ್ ಪಾಳ್ಯದಲ್ಲಿ ಕೃತ್ಯ ನಡೆಸಿರುವವರೂ ಅದೇ ರೀತಿಯ ಮನೋಭಾವವನ್ನು ತಳೆದಿದ್ದಾರೆಯೇ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೊರೋನಾ ನಿಯಂತ್ರಣದ ಕಾರದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಿರ್ದಾಕ್ಷಿಣ್ಯ ಕ್ರಮ; ಶ್ರೀರಾಮುಲು

ಈ ಬಗ್ಗೆ ಮಾಧ್ಯಮಗಳು ವರದಿ ಬಿತ್ತರಿಸುತ್ತಿದ್ದಂತೆಯೇ ಎಚ್ಛೆತ್ತುಕೊಂಡ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಬೆಂಗಳೂರಿನ ಸಾಧಿಕ್ ಪಾಳ್ಯ ಘಟನೆ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳು ಸೇರಿ ನರ್ಸ್ ಮೇಲೆ ಹಲ್ಲೆ ಮಾಡಿದ್ದು ಅತ್ಯಂತ ಹೇಯ ಕೃತ್ಯ. ಯಾರೇ ಆಗಲಿ, ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನುರೀತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ಇನ್ನೊಂದೆಡೆ, ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆಯ ಮನೆಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ, ತಪ್ಪಿಸ್ಥರ ವಿರುದ್ಧ ಸರ್ಕಾರ ಕರಾಮಕ್ಕೆ ಆದೇಶಿಸಿದೆ ಎಂದರು.

ಈ ಪ್ರಕರಣ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿಯಾದ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಹೊಯ್ಸಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗುಂಪನ್ನು ಚದುರಿಸಿ,‌ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದರು‌. ಈ ಕುರಿತು ದೂರನ್ನಾಧರಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

Related posts