ಕರಾವಳಿಗಾಗಿ ಪ್ರತ್ಯೇಕ ಮರಳು ನೀತಿ; ರಾಜ್ಯ ಸರ್ಕಾರದ ಚಿಂತನೆ

ಬೆಂಗಳೂರು: ಕರಾವಳಿ ಭಾಗಗಳಲ್ಲಿ ಮರಳು ಗಣಿಗಾರಿಕೆ ಚಟುವಟಿಕೆ ನಡೆಸಲು ಅನುಕೂಲವಾಗಲು ಪ್ರತ್ಯೇಕ ಕರಾವಳಿ ಮರಳು ನೀತಿಯನ್ನು ಸರ್ಕಾರ ಪ್ರಕಟಿಸಲಿದೆ.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಯು.ಟಿ.ಖಾದರ್ ಅವರ ಪ್ರಶ್ನೆಗೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಅನ್ವಯವಾಗುವಂತೆ ಈ ಮರಳು ನೀತಿಯನ್ನು ಪ್ರಕಟಿಸಲಿದ್ದೇವೆ. ಇದರಿಂದಾಗಿ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ನಾನು ಜಿಲ್ಲೆಗಳಿಗೆ ಭೇಟಿ ಕೊಟ್ಟಾಗ ನನಗೂ ಕೂಡ ಇದೇ ಸಮಸ್ಯೆ ಎದುರಾಗಿತ್ತು. ರಾಜ್ಯದ ಅನೇಕ ಕಡೆ ಮರಳಿನ ಅಲಭ್ಯತೆಯಿಂದಾಗಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲೂ ಇಂತಹ ಸಮಸ್ಯೆ ಉಂಟಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಜಿಲ್ಲಾ ಮತ್ತು ರಾಜ್ಯಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿದ್ದೇನೆ. ಮರಳಿನ ಬಗ್ಗೆ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅರಿವಿದೆ. ಪದೇ ಪದೇ ಸಭೆ ನಡೆಸುವುದು , ಮುಂದೂಡುವುದರಲ್ಲಿ ಅರ್ಥವಿಲ್ಲ. ಜನರಿಗೆ ಸುಲಭವಾಗಿ ಮರಳು ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಆಶ್ವಾಸನೆ ನೀಡಿದರು.

ಪ್ರತಿಯೊಬ್ಬರಿಗೂ ಗುಣಮಟ್ಟದ ಹಾಗೂ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಮರಳು ಪೂರೈಕೆ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ಇಲಾಖೆಯಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿ ಮಾಡಲಿದ್ದೇವೆ ಎಂದು ಹೇಳಿದರು.
ನಮ್ಮ ಸರ್ಕಾರ ಮರಳನ್ನು ಪ್ರತಿಯೊಬ್ಬರಿಗೂ ಮಾರುಕಟ್ಟೆ ದರದಲ್ಲೇ ತಲುಪಿಸಲು ಬದ್ದವಾಗಿದೆ. ಗುಣಮಟ್ಟದ ಮರಳನ್ನು ಸುಲಭವಾಗಿ ತಲುಪಿಸುವುದು ನಮ್ಮ ಪ್ರಮುಖ ಆದ್ಯತೆಗಳಾಗಿವೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‍ಜೆಡ್ ವ್ಯಾಪ್ತಿಯಲ್ಲಿನ ನದಿಪಾತ್ರಗಳಲ್ಲಿ 2020-21 ಸಾಲಿನಲ್ಲಿ ಒಟ್ಟು 13 ಮರಳು ದಿಬ್ಬಗಳನ್ನು ತೆರವುಗೊಳಿಸಲು ಕರಾವಳಿ ವಲಯ ನಿರ್ವಹಣ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.
13 ಮರಳು ದಿಬ್ಬಗಳಲ್ಲಿ ಮರಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಏಳು ಸದಸ್ಯರ ಸಮಿತಿಯಿಂದ ಒಟ್ಟು 104 ಸಾಂಪ್ರದಾಯಿಕ ಮರಳು ತೆಗೆಯುವ ವ್ಯಕ್ತಿಗಳಿಗೆ ಒಂದು ವರ್ಷದ ಅವಧಿಗೆ ತಾತ್ಕಾಲಿಕ ಪರವಾನಗಿಗಳನ್ನು ನೀಡಲಾಗಿದೆ ಎಂದರು.

Related posts