ಜ.1ರಿಂದ ಶಾಲೆಗಳ ಆರಂಭ; ಸರ್ಕಾರದ ಆತುರದ ನಡೆಗೆ ಕೆಪಿಸಿಸಿ ತರಾಟೆ

ಬೆಂಗಳೂರು: ಜನವರಿ ಒಂದರಿಂದ ಶಾಲೆಗಳ ಆರಂಭಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಸರ್ಕಾರ ಮಕ್ಕಳು ಮತ್ತು ಶಾಲೆ ವಿಚಾರದಲ್ಲಿ ಪ್ರತಿ ನಿಮಿಷವೂ ಗೊಂದಲದಲ್ಲಿದೆ. ನಮ್ಮ ಶಿಕ್ಷಣ ಸಚಿವರು ಸಿಎಂ, ಶಾಲೆ ಆಡಳಿತ ಮಂಡಳಿ, ಪೋಷಕರ ಜತೆ ಮಾತನಾಡುವುದಾಗಿ ಹೇಳುತ್ತಾರೆ. ಸರ್ಕಾರ ಮೊದಲು ಗೊಂದಲ ನಿವಾರಣೆ ಮಾಡಬೇಕು. ಇಷ್ಟು ದಿನ ಸಂಸ್ಥೆಗಳು ನಡೆಯುತ್ತಿರಲಿಲ್ಲ. ಶಿಕ್ಷಕರಿಗೂ ಸಂಬಳ ನೀಡಬೇಕು. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದರು.

ಶಾಲೆ ತೆರೆಯಬೇಕೋ ಬೇಡವೋ ಎಂಬುದರ ಬಗ್ಗೆ ತಜ್ಞರ ಜತೆ ಚರ್ಚೆ ಮಾಡಬೇಕು. ರಾಜಕಾರಣಿಗಳು ಏನೇ ಅಭಿಪ್ರಾಯ ಹೇಳಿದರೂ ಅಂತಿಮವಾಗಿ ವಿದ್ಯಾರ್ಥಿಗಳು, ಶಾಲೆಗಳು ಹಾಗೂ ಶಿಕ್ಷಕರ ಹಿತ ಹಾಗೂ ಭವಿಷ್ಯ ಕಾಯಬೇಕು. ನಾವು ರಾಜಕೀಯ ಪಕ್ಷವಾಗಿ ನಮ್ಮ ಅಭಿಪ್ರಾಯ ಹೇಳುವುದಕ್ಕಿಂತ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಹಾಗೂ ಆ ತೀರ್ಮಾನದಲ್ಲಿ ಸ್ಪಷ್ಟತೆ ಇರಬೇಕು ಎಂದವರು ಹೇಳಿದರು.

ಪೋಷಕನಾಗಿ, ಶಿಕ್ಷಣ ಸಂಸ್ಥೆಯ ಭಾಗವಾಗಿ ನನಗೂ ಆತಂಕಗಳಿವೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಗೊಂದಲ ಇದೆ ಎಂದು ಡಿಕೆಶಿ ಸರ್ಕಾರದ ಗಮನಸೆಳೆದರು.

ಸರ್ಕಾರದಲ್ಲಿ ದೊಡ್ಡ ಅನುಭವವಿರುವ ಪಂಡಿತರಿದ್ದಾರೆ. ಅವರಿಗೆ ನಾನ್ಯಾಕೆ ಸಲಹೆ ನೀಡಲಿ. ಅವರು ಏನು ಬೇಕಾದರೂ ತೀರ್ಮಾನ ಮಾಡಲಿ ಎಂದ ಅವರು, ನಾವು ಯಾವುದೇ ಸಲಹೆ ಕೊಟ್ಟರೂ ಅದರ ವಿರುದ್ಧವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಹಿಂದೆ ಅದನ್ನು ನೋಡಿದ್ದೇವೆ. ಅವರು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಅವರಿಗೆ ಅವರದೇ ಆದ ವೈಯಕ್ತಿಕ ಅಜೆಂಡಾ ಇದೆ. ಏನೇ ಆದರೂ ಅದಕ್ಕೆ ಕಾಂಗ್ರೆಸ್ ಹಾಗೂ ಡಿ.ಕೆ ಶಿವಕುಮಾರ್ ಕಾರಣ ಎಂದು ಹೇಳುತ್ತಾರೆ. ರೈತರು ಹೋರಾಟ ಮಾಡಿದರೆ ಕಾಂಗ್ರೆಸ್ ನವರು ಎತ್ತಿಕಟ್ಟಿದ್ದಾರೆ ಅಂತಾರೆ. ಒಟ್ಟಿನಲ್ಲಿ ಅವರು ನಮ್ಮನ್ನು ನೆನೆಸಿಕೊಳ್ಳುತ್ತಿರಬೇಕು ನೆನೆಸಿಕೊಳ್ಳಲಿ ಬಿಡಿ ಎಂದರು.

Related posts