ಶಾಲಾ-ಕಾಲೇಜುಗಳಲ್ಲಿ ಉತ್ತಮ ಹಾಜರಾತಿ; ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್ ರಾಜಾ ನಂತರ ಇದೀಗ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳವಾಗಿದೆ. ಕೊರೋನಾ ಸೋಂಕಿನ ಆತಂಕದ ನಡುವೆಯೇ ಹತ್ತನೇ ತರಗತಿ ಹಾಗೂ ಪಿಯಿಸಿ ಕ್ಲಾಸ್’ಗಳು ಆರಂಭವಾಗಿದ್ದು, ಸರ್ಕಾರದ ಈ ಕ್ರಮದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರಿಗೆ ಶಹಬ್ಬಾಸ್’ಗಿರಿ ವ್ಯಕ್ತವಾಗುತ್ತಿದೆ.

ಕಳೆದ ವರ್ಷದ ಎಸ್ಸೆಸೆಲ್ಸಿ, ಪಿಯುಸಿ ಪರೀಕ್ಷೆಯನ್ನೂ ಯಶಸ್ವಿಯಾಗಿ ನಡೆಸುವ ಮೂಲಕ ದೇಶದ ಗಮನಸೆಳೆದಿರುವ ಸಚಿವ ಸುರೇಶ ಕುಮಾರ್ ಬಗ್ಗೆ ಈ ಬಾರಿ ಶಾಲಾರಂಭ ವಿಚಾರದಲ್ಲೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ರಾಜ್ಯದಲ್ಲಿರುವ 5492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗಿರುವ 4,24,250 ವಿದ್ಯಾರ್ಥಿಗಳ ಪೈಕಿ ಮಂಗಳವಾರ 2,42,886 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ.57.25 ಹಾಜರಿ) ಅಂತೆಯೇ 16,850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ 9,29,130 ವಿದ್ಯಾರ್ಥಿಗಳ ಪೈಕಿ 4,77,051 ವಿದ್ಯಾರ್ಥಿಗಳು ಹಾಜರಾಗಿದ್ದಾರೆ (ಶೇ.51.34 ಹಾಜರಾತಿ).

6 ರಿಂದ 9ನೇ ತರಗತಿಗಳಿಗೆ ನಡೆಯುತ್ತಿರುವ ಪರಿಷ್ಕೃತ ವಿದ್ಯಾಗಮ ತರಗತಿಗಳಿಗೆ ಮಂಗಳವಾರ 6,30,557 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಪ್ರಸ್ತುತ ವರ್ಷದ ಶಾಲಾರಂಭದ ಐದನೇ ದಿನವಾದ ಮಂಗಳವಾರ ವಿದ್ಯಾರ್ಥಿಗಳ ಹಾಜರಾತಿ ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಶಾಲಾ ಕಾಲೇಜುಗಳನ್ನು ಆರಂಭಿಸಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಂತಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೂಡಾ ಮಾಹಿತಿ ಹಂಚಿಕೊಂಡಿದ್ದಾರೆ.

Related posts