ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರ ಮುಷ್ಕರಕ್ಕೆ 2 ತಿಂಗಳಾದರೂ ಸಿಗದ ಪರಿಹಾರ

ಬೆಂಗಳೂರು: ಬಿಡದಿ ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರ ಮುಷ್ಕರಕ್ಕೆ 2 ತಿಂಗಳಾಗುತ್ತಿದೆಯಾದರೂ, ಪರಿಹಾರ ಕಾಣದಿರುವ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರು-ಸಂಸ್ಥೆಯ ಮುಖ್ಯಸ್ಥರ ನಡುವಿನ ವ್ಯವಸ್ಥಾಪಕರ ಭಿನ್ನಾಭಿಪ್ರಾಯಗಳು, ಪ್ರತಿಷ್ಠೆ, ಸರ್ಕಾರದ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿರಬಹುದು. ರಾಜ್ಯದ ಔದ್ಯಮಿಕ ಪ್ರಗತಿ ದೃಷ್ಟಿಯಿಂದ ಈ ಸಮಸ್ಯೆಗೆ ಅಂತ್ಯ ಹಾಡುವುದು ಈಗಿನ ಅಗತ್ಯ ಎಂದವರು ಹೇಳಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಹೆಚ್ಡಿಕೆ, ವ್ಯವಸ್ಥಾಪಕರ ಮಾತು ಕೇಳಿಯೋ, ಕಾರ್ಮಿಕರ ಮೇಲಿನ ಕ್ಷುಲ್ಲಕ ಆರೋಪಗಳಿಗೋ ಸಂಸ್ಥೆ 3000 ಕಾರ್ಮಿಕರನ್ನು ಬೀದಿಗೆ ತಳ್ಳಿದೆ. ನಮ್ಮ ನೆಲ, ಜಲ, ಗಾಳಿ, ಸೌಕರ್ಯ ಬಳಸಿಕೊಂಡು ನಡೆಯುತ್ತಿರುವ ಸಂಸ್ಥೆಗಳೂ ನಮ್ಮವರ ವಿಷಯದಲ್ಲಿ ಇಷ್ಟು ಕ್ರೂರವಾಗಿರುವುದು ಸರಿಯಲ್ಲ. ಸಂಸ್ಥೆ ಮುಖ್ಯಸ್ಥರು ಪ್ರತಿಷ್ಠೆ ಪಕ್ಕಕ್ಕಿಟ್ಟು ಮಾನವೀಯವಾಗಿ ವರ್ತಿಸಬೇಕು ಎಂದಿದ್ದಾರೆ.

ಕಾರ್ಮಿಕರ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಸ್ವತಃ ನಾನೇ ಹಲವು ಸಭೆಗಳನ್ನು ನಡೆಸಿದ್ದೇನೆ. ಕಾರ್ಮಿಕರು-ಸಂಸ್ಥೆಯ ಮುಖ್ಯಸ್ಥರ ನಡುವೆ ಇರುವ ವ್ಯವಸ್ಥಾಪಕ ವರ್ಗ ಗೊಂದಲ ಸೃಷ್ಟಿ ಮಾಡುತ್ತಿರುವುದು ನನಗೆ ಮೇಲ್ನೋಟಕ್ಕೆ ಗೊತ್ತಾಗಿದೆ. ಈ ವ್ಯವಸ್ಥಾಪಕ ವರ್ಗ ಸಾಮಾನ್ಯವಾಗಿ ಈ ಪ್ರದೇಶ, ಪ್ರಾಂತ್ಯದವರಾಗಲಿ, ರಾಜ್ಯದವರಾಗಲಿ ಅಲ್ಲ ಎಂಬುದು ಗಮನಾರ್ಹ ಎಂದವರು ಬೊಟ್ಟುಮಾಡಿದ್ದಾರೆ.

ಕೋಲಾರದ ‘ವಿಸ್ಟ್ರಾನ್‌’ ಘಟನೆಗೆ ಸಂಸ್ಥೆಯ ವ್ಯವಸ್ಥಾಪನೆಯಲ್ಲಿ ಆಗಿದ್ದ ಲೋಪವೇ ಕಾರಣ ಎಂದೂ, ಕಾರ್ಮಿಕರು, ನೌಕರರನ್ನು ಘನತೆಯಿಂದ ಕಾಣುವುದಾಗಿಯೂ ಆಪಲ್‌ ಸಂಸ್ಥೆ ಹೇಳಿದೆ. ವಿಸ್ಟ್ರಾನ್‌ ಕಂಪನಿಯೂ ತನ್ನ ಉಪಾಧ್ಯಕ್ಷನನ್ನು ಇದೇ ಉದ್ದೇಶಕ್ಕೆ ಕಿತ್ತು ಹಾಕಿದೆ. ಟೊಯೋಟಾ ಕೂಡ ತನ್ನ ಆಂತರಿಕ ವಿಚಾರಗಳ ಬಗ್ಗೆ ಒಮ್ಮೆ ಪಾರಾಮರ್ಶೆ ಮಾಡಬೇಕು ಎಂದಿರುವ ಮಾಜಿ ಸಿಎಂ, ಸಮಸ್ಯೆಯನ್ನು ಸರ್ಕಾರವೂ ಆದ್ಯತೆ ಮೇಲೆ ಬಗೆಹರಿಸಲು ಮುಂದಾಗಬೇಕು. ಅದರಿಂದ ರಾಜ್ಯಕ್ಕೂ ಲಾಭವಿದೆ ಎಂಬುದನ್ನು ಸರ್ಕಾರ ಗಮನಿಸಬೇಕು. ಕಾರ್ಮಿಕರ ಪ್ರತಿಭಟನೆ, ದಾಂಧಲೆ, ಮುಷ್ಕರಗಳಂಥ ಘಟನೆಗಳು ಹೂಡಿಕೆದಾರರಲ್ಲಿ ಅಪನಂಬಿಕೆ ಹುಟ್ಟು ಹಾಕಲು ಕಾರಣವಾಗುತ್ತದೆ. ರಾಜ್ಯದಲ್ಲಿ ಸುಲಲಿತ ಉದ್ದಿಮೆ ನಡೆಸಲು ಅವಕಾಶಗಳಿಲ್ಲ ಎಂಬ ಭಾವನೆ ಮೂಡಿಸುತ್ತವೆ ಎಂದಿದ್ದಾರೆ.

Related posts