ಹೆಲ್ಮೆಟ್ ವಿಷಯ.. ರಸ್ತೆಗಳಲ್ಲಿನ್ನು ಕಳ್ಳ-ಪೊಲೀಸ್ ಆಟವಿಲ್ಲ

ಬೆಂಗಳೂರು: ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುವವರನ್ನು , ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸುತ್ತಿರುವವರನ್ನು ಕಾಡುತ್ತಿರುವ ಪೊಲೀಸರಿಗೆ ಸದ್ಯಕ್ಕೆ ಬ್ರೇಕ್.. ಸಾರ್ವಜನಿಕರಿಗೂ ರಿಲೀಫ್.. ಆದರೆ ಕಾನೂನು ಉಲ್ಲಂಘಿಸಿದಲ್ಲಿ ನಿಲ್ಲದು ಫೈನ್.

ಏನಿದು ಅಚ್ಚರಿ ಅಂತೀರಾ? ಈ ವರೆಗೂ ಬೆಂಗಳೂರಿನ ರಸ್ತೆಗಳು ವಾಹನ ಸವಾರರು ಮತ್ತು ಹಾಗೂ ಸಂಚಾರ ಪೊಲೀಸರ ನಡುವೆ ನಿತ್ಯವೂ ಕಳ್ಳ-ಪೊಲೀಸ್ ಆಟದ ರೀತಿ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದ್ದವು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ ಕೈಗೊಂಡರೆ ದಂಡ ಕಟ್ಟಿಟ್ಟ ಬುತ್ತಿ. ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದರೂ ಫೈನ್. ಸಿಗ್ನಲ್ ಜಂಪ್ ಮಾಡಿದರಂತೂ ಜೇಬಿಗೆ ಕತ್ತರಿ ಗ್ಯಾರಂಟಿ. ತಿರುವು ರಸ್ತೆಗಳಲ್ಲಿ, ಮರಗಳ ಮರೆಯಲ್ಲಿ ನಿಂತು ಪೊಲೀಸ್ ಸಿಬ್ಬಂದಿ ಈ ನಿಯಮ ಉಲ್ಲಂಘನೆ ಬಗ್ಗೆ ಹದ್ದಿನ ಕಣ್ಣಿಡುತ್ತಿದ್ದರು. ನಿತ್ಯವೂ ಸಂಚಾರ ನಿಯಮ ಉಲ್ಲಂಘಿಸಿದ ನೂರಾರು ಮಂದಿಯಿಂದ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದರು. ಆದರೆ ಈ ಕಾರ್ಯವೈಖರಿಗೂ ಸಾರ್ವಜನಿಕವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟುವ ಕೆಲಸಕ್ಕೆ ಬ್ರೇಕ್

ಪರಿಸ್ಥಿತಿ ಪರಾಮರ್ಷಿಸಿದ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರು, ಸದ್ಯಕ್ಕೆ ಈ ರೀತಿಯ ಕಾರ್ಯಾಚರಣೆಗೆ ಬ್ರೇಕ್ ಹಾಕಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ರವಿಕಾಂತೇಗೌಡ, ಸಂಚಾರ ವಿಭಾಗದ ಪೊಲೀಸರ ವಿರುದ್ದ ಕೇಳಿ ಬರುತ್ತಿರುವ ಆರೋಪಗಳ ಹಾಗೂ ಮಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನ-ಮಂಥನ ನಡೆಸಿದರು. ಈ ವೇಳೆ ಸಂಚಾರ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಂಕಷ್ಟಗಳ ಬಗ್ಗೆಯೂ ರವಿಕಾಂತೇಗೌಡರು ಮಮ್ಮಲ ಮರುಗಿದರು.

ಪೊಲೀಸ್ ಇಲಾಖೆಯನ್ನು ಜನಸ್ನೇಹೀಯಾಗಿಸುವ ನಿಟ್ಟಿನಲ್ಲಿ ಕಾರ್ಯವೈಖರಿಯನ್ನೂ ಪರಿವರ್ತಿಸಲು ಸೂತ್ರವನ್ನೂ ಹಾಕಿಕೊಟ್ಟರು. ಸದ್ಯಕ್ಕೆ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟುವ ಕೆಲಸಕ್ಕೆ ಬ್ರೇಕ್ ಹಾಕುವಂತೆ ಬೆಂಗಳೂರಿನ 44 ಸಂಚಾರ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ಜಂಟಿ ಆಯುಕ್ತರು ನಿರ್ದೇಶನ ನೀಡಿದರು.

ಆದರೂ ಹೈ ಆಲರ್ಟ್..!

ಸದ್ಯಕ್ಕೆ ಈ ರೀತಿಯ ಬದಲಾವಣೆಯಾದರೂ ನಿಯಮ ಉಲ್ಲಂಘಿಸಿದವರು ಕಾನೂನು ಪ್ರಹಾರದಿಂದ ಪಾರಾಗಲು ಸಾಧ್ಯವಿಲ್ಲ. ಇಂಥವರನ್ನು ಪತ್ತೆಹಚ್ಚಲು ಪೊಲೀಸ್ ಕಣ್ಗಾವಲನ್ನು ಹೆಚ್ಚಿಸಲಾಗಿದೆ. ಅಧಿಕಾರಿಗಳು, ಹೆಡ್‌ ಕಾನ್ಸ್‌ಟೆಬಲ್‌ ಮತ್ತು ಪೊಲೀಸ್‌ ಕಾನ್ಸ್‌ಟೇಬಲ್‌ಗಳು ತಮಗೆ ನೀಡಲಾಗಿರುವ ಡಿಜಿಟಲ್‌ ಎಫ್‌ಟಿವಿಆರ್‌ (ಮೊಬೈಲ್‌) ಮೂಲಕ ಕನಿಷ್ಠ ದಿನಕ್ಕೆ 25 ಕೇಸ್‌ ದಾಖಲಿಸಬೇಕು ಎಂದು ಸೂಚನೆ ನೀಡಲಾಗಿದೆ.ಅಷ್ಟೇ ಅಲ್ಲ, ಮಾಲಿನ್ಯ ತಪಾಸಣೆ ಕೇಂದ್ರಗಳಿಗೆ ತೆರಳಿ ಅಲ್ಲಿಗೆ ಬರುವ ವಾಹನಗಳ ಬಾಕಿ ಕೇಸ್‌ ತಪಾಸಣೆ ಮಾಡಬೇಕು. ಕೇಸ್‌ ಇದ್ದರೆ ದಂಡ ವಸೂಲಿ ಮಾಡಬೇಕು ಎಂದು ರವಿಕಾಂತೇಗೌಡರು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Related posts