ತುಮಕೂರು ಕೈಗಾರಿಕಾ ನೋಡ್; ಕರ್ನಾಟಕದಲ್ಲಿ ಆರ್ಥಿಕತೆ ಉತ್ತೇಜನದ ನಿರೀಕ್ಷೆ

ಬೆಂಗಳೂರು: ಕರ್ನಾಟಕವನ್ನು ವಿಶ್ವದರ್ಜೆಯ ಔದ್ಯಮಿಕ ಜಾಲವಾಗಿ ಅಭಿವೃದ್ಧಿ ಪಡಿಸಲು ಚೆನೈ – ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ನೋಡ್‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 1,701.81 ಕೋಟಿ ರೂ. ಮೀಸಲಿರಿಸಿದ್ದು, ಇದರಿಂದ ಅಂದಾಜು 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡಿದ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಹದ್ಯೋಗಿಗಳಿಗೆ ರಾಜ್ಯ ಸರಕಾರದ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

ತುಮಕೂರಿನಲ್ಲಿ ಕೈಗಾರಿಕಾ ನೋಡ್‌ ನಿರ್ಮಿಸಬೇಕೆಂಬ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ)ಯ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಭೆ ಅಂಗೀಕರಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವಿಷಯಗಳ ಸಚಿವ ಸಂಪುಟ ಸಮಿತಿಯ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಜಗದೀಶ್‌ ಶೆಟ್ಟರ್‌ ಅವರು, ಈ ಮಹತ್ವಾಕಾಂಕ್ಷೆಯ ಕಾರಿಡಾರ್‌ ನ ಭಾಗವಾಗಿ ತುಮಕೂರು ನೋಡ್‌ ಗೆ ಅನಮೋದನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಹದ್ಯೋಗಿಗಳಿಗೆ ರಾಜ್ಯ ಸರಕಾರದ ವತಿಯಿಂದ ಅಭಿನಂದನೆ ಸಲ್ಲಿತ್ತಿದ್ದೇನೆ. ಈ ಯೋಜನೆಯ ಅನುಷ್ಟಾನದಿಂದ ರಾಜ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿದ್ದು, ರಾಜ್ಯದ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ. ಕೈಗಾರಿಕಾ ಕ್ಷೇತ್ರ ಮತ್ತಷ್ಟು ಉತ್ತುಂಗವನ್ನು ತಲುಪಲಿದೆ. ಲಕ್ಷಾಂತರ ನಿರುದ್ಯೋಗಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ ಎಂದರು. ಈ ಯೋಜನೆಯಿಂದಾಗಿ ಹತ್ತು ಹಲವಾರು ಬಗೆಯ ಉದ್ಯಮಗಳು ಪ್ರಾರಂಭವಾಗಲಿದ್ದು, ದೇಶ ವಿದೇಶಗಳ ಹೂಡಿಕೆಗೆ ಯಥೇಚ್ಚವಾದ ಅವಕಾಶಗಳು ತೆರೆದುಕೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಮಹತ್ವಾಕಾಂಕ್ಷಿ ಚೆನೈ – ಬೆಂಗಳೂರು ಕೈಗಾರಿಕಾ ಕಾರಿಡಾರ್‌ (CBIC) ನ ಭಾಗವಾದ ತುಮಕೂರು ಇಂಡಸ್ಟ್ರೀಯಲ್‌ ನೋಡ್‌ ನಿಂದ 88,500 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ. ಅಲ್ಲದೆ, ಕಾರಿಡಾರ್‌ ನ ಆರಂಭಿಕ ಹಂತದಲ್ಲಿ ಚಿಲ್ಲರೆ ವ್ಯಾಪಾರ, ಕಚೇರಿಗಳು ಮತ್ತು ಇತರೆ ವಾಣಿಜ್ಯ ಅವಕಾಶಗಳಂತಹ ಸೇವಾ ವಲಯದಲ್ಲಿ 17,700 ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೆ, ಆತ್ಮನಿರ್ಭರ ಭಾರತದ ಗುರಿಯನ್ನು ಮುಟ್ಟುವ ಉದ್ದೇಶವನ್ನು ಈ ಯೋಜನೆಯು ಹೊಂದಿದ್ದು, ಈ ಕಾರಿಡಾರ್‌ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಗಟ್ಟಿಗೊಳಿಸುವುದಲ್ಲದೆ ದೇಶೀಯ ಒಟ್ಟು ಉತ್ಪನ್ನ ಜಿಡಿಪಿ ಗೆ ತನ್ನದೇ ಆದ ಕೊಡುಗೆಯನ್ನು ನೀಡಲಿದೆ ಎಂದು ಹೇಳಿದರು.

Related posts