ವಿದ್ಯಾಗಮವು ಶಾಲಾರಂಭವಲ್ಲ: ಸುರೇಶ ಕುಮಾರ್ ಸ್ಪಷ್ಟನೆ

ಬೆಂಗಳೂರು: ವಿದ್ಯಾಗಮವು ಶಾಲೆಯ ಆರಂಭವಲ್ಲ. ಒಮ್ಮೆಗೆ ಅತಿ ಕಡಿಮೆ ಸಂಖ್ಯೆಯ ಮಕ್ಕಳ ತಂಡದೊಂದಿಗೆ ಶಾಲಾವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಅನುಕೂಲಕ್ಕೆ ತಕ್ಕಂತೆ ಪಾಠಗಳು ನಡೆಯುತ್ತವೆ. ತಜ್ಞರ ಸಮಿತಿಯ ಶಿಫಾರಸಿನನ್ವಯ ವೈಜ್ಞಾನಿಕವಾಗಿ ತರಗತಿಗಳು ನಡೆಯುತ್ತಿದ್ದು, ಎಲ್ಲ ರೀತಿಯ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು-ಎಸ್ಒಪಿ ಆಧಾರದಲ್ಲಿ ಕೈಗೊಳ್ಳಲಾಗುತ್ತದೆ. ಮಕ್ಕಳು ತರಗತಿ ಪಾಠಗಳಿಗೆ ಹಾಜರಾದಂತೆ ಎಲ್ಲರೂ ಒಂದೇ ಬಾರಿಗೆ ಬರುತ್ತಿಲ್ಲ. ಆಯಾ ಪ್ರದೇಶದ ಮಾರ್ಗದರ್ಶಿ ಶಿಕ್ಷಕರು ತಮಗೆ ಸನಿಹದ ನೆರೆಹೊರೆಯ ಕೆಲವೇ ಮಕ್ಕಳನ್ನು ತಂಡದಲ್ಲಿ ಪಟ್ಟಿ ಮಾಡುತ್ತಾರೆ. ಇದು ಶಾಲಾರಂಭವಲ್ಲ ಎಂಬುದನ್ನು ಪೋಷಕರು ಮನಗಾಣಬೇಕು ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಹೇಳಿದ್ದಾರೆ.

ವಿದ್ಯಾಗಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಆನ್-ಲೈನ್ ಶಿಕ್ಷಣ ವಂಚಿತರಿಗೆ ಅನುಕೂಲವಾಗಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯು ಯಾವುದೇ ವಿದ್ಯಾರ್ಥಿಯ ಕಲಿಕೆಯನ್ನು ಹಕ್ಕಾಗಿ ಪರಿಗಣಿಸುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ವಾತಾವರಣದಲ್ಲಿಯೂ ಶಿಕ್ಷಣವನ್ನು ನೀಡುವುದು  ಸರ್ಕಾರದ ಜವಾಬ್ದಾರಿಯಾದ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗಳಿಗೆ ಕಡ್ಡಾಯವಾಗಿ ದಾಖಲಾಗಬೇಕಿದೆ ಹಾಗೆಯೇ   ಅವರ ಕಲಿಕೆ ನಿರಂತರವಾಗಿರಬೇಕಿರುವಂತೆ ನೋಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

Related posts