ನವದೆಹಲಿ: ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 10 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ತಂಡಕ್ಕೆ ಎನ್‌ಐಎ ಹೆಚ್ಚುವರಿ ಮಹಾನಿರ್ದೇಶಕ ವಿಜಯ್ ಸಖಾರೆ ನೇತೃತ್ವ ವಹಿಸಲಿದ್ದು, ಅವರೊಂದಿಗೆ ಒಬ್ಬ ಇನ್ಸ್‌ಪೆಕ್ಟರ್ ಜನರಲ್ (ಐಜಿ), ಇಬ್ಬರು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್‌ಗಳು (ಡಿಐಜಿ), ಮೂವರು ಪೊಲೀಸ್ ಅಧೀಕ್ಷಕರು (ಎಸ್‌ಪಿ) ಹಾಗೂ ಉಳಿದವರು ಡಿಎಸ್‌ಪಿ ಮಟ್ಟದ ಅಧಿಕಾರಿಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಗೃಹ ಸಚಿವಾಲಯವು ದೆಹಲಿ ಸ್ಫೋಟ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿದ ಒಂದು ದಿನದ ನಂತರ ಈ ತಂಡ ರಚನೆಯಾಗಿದೆ. ನವೆಂಬರ್ 10ರ ಸಂಜೆ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ನಿಲ್ಲಿಸಲಾಗಿದ್ದ ಹರಿಯಾಣ ನೋಂದಾಯಿತ ಕಾರು ಸ್ಫೋಟಗೊಂಡು, ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದು, ಡಜನಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.…
