ಬೆಂಗಳೂರು: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ ಆರೋಪದಲ್ಲಿ ಹಿಂದೂ ಸಂಘಟನೆಯ ನಾಯಕಿ ಚೈತ್ರಾ ಕುಂದಾಪುರ, ಬಿಜೆಪಿ ನಾಯಕ ಗಗನ್ ಕಡೂರು ಗ್ಯಾಂಗನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಕಲಿ ಆರೆಸ್ಸೆಸ್ ಪ್ರಚಾರಕರನ್ನು ಸೃಷ್ಟಿಸಿ ಬಿಜೆಪಿ ರಾಜ್ಯ ನಾಯಕರನ್ನೇ ವಂಚಿಸಿದ ಆರೋಪ ಚೈತ್ರಾ ಕುಂದಾಪುರ ಮೇಲಿದೆ. ತನ್ನ ವಾಕ್ಚಾತುರ್ಯ ಮೂಲಕ ಹಿಂದೂ ಕಾರ್ಯಕರ್ತರ ಮುಗ್ದತೆಯನ್ನು ಬಳಸಿ, ಬಿಜೆಪಿ ಟಿಕೆಟ್ ಕೊಡುವುದಾಗಿ ನಂಬಿಸಿದ್ದ ಚೈತ್ರಾ ಕುಂದಾಪುರ, ಬಿಜೆಪಿ ಯುವಮೋರ್ಚಾ ನಾಯಕ ಗಗನ್ ಕಡೂರು, ಉತ್ತರ ಕರ್ನಾಟಕದ ಹಾಲಶ್ರೀ ಸ್ವಾಮೀಜಿ ಸಹಿತ 7 ಮಂದಿಯ ವಿರುದ್ದ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ನಾಯಕರಾದ ಗೋವಿಂದ ಬಿ.ಪೂಜಾರಿ ಅವರು ಈ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದ್ದಾರೆ. ಕಳೆದೆರಡು ದಿನಗಳಿಂದ ಆರೋಪಿಗಳಿಗಾಗಿ ಬಲೆ ಬೀಸಿದ್ದ ಸಿಸಿಬಿ ಪೊಲೀಸರು ಮಂಗಳವಾರ ಗಗನ್ ಕಡೂರು ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು. ರಾತ್ರಿ ಚೈತ್ರಾ ಕುಂದಾಪುರ ಸಹಿತ ಮತ್ತೆ ಮೂವರನ್ನು ಸಿಸಿಬಿ ತಂಡ ಬಂದಿಸಿ ಬೆಂಗಳೂರಿಗೆ ಕರೆತಂದಿದೆ.